»   » 54ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

54ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

Subscribe to Filmibeat Kannada

54ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಇಂದು ಪ್ರದಾನ ಮಾಡಲಿದ್ದಾರೆ. 2006ನೇ ಸಾಲಿನಲ್ಲಿ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ಚಿತ್ರ ನಿರ್ದೇಶಕ ತಪನ್ ಸಿನ್ಹಾ ಮತ್ತು ಭಾರತೀಯ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೂವರು ಹಿರಿಯ ಕಲಾವಿದರು ಜೀವಮಾನದ ಪ್ರಶಸ್ತಿ ಮತ್ತು 31 ವಿಭಿನ್ನ ವಿಭಾಗಗಳಲ್ಲಿ ಕಲಾವಿದರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ರಾಷ್ಟ್ರೀಯ ಭಾವೈಕ್ಯತೆಯ ನರ್ಗಿಸ್ ದತ್ ಪ್ರಶಸ್ತಿ ಗಳಿಸಿರುವ ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಐತಿಹಾಸಿಕ ಚಿತ್ರ ರಜತ ಕಮಲ ಪ್ರಶಸ್ತಿ ಸ್ವೀಕರಿಸಲಿದೆ. ಈ ಪ್ರಶಸ್ತಿ ರಜತ ಕಮಲ, ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಲಾ ರು.1,50,000 ಒಳಗೊಂಡಿದೆ. ಈ ಚಿತ್ರವನ್ನು ಮಧು ಬಂಗಾರಪ್ಪ ನಿರ್ಮಿಸಿದ್ದಾರೆ.

ಜೀವಮಾನದ ಅತ್ಯುತ್ತಮ ಸೇವೆಗಾಗಿ ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ, ಕನ್ನಡ ನಟಿ ಬಿ. ಸರೋಜಾದೇವಿಯವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಜೀವಮಾನದ ಸಾಧನೆಗಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವ ಇನ್ನಿಬ್ಬರೆಂದರೆ ಹಿಂದಿ ನಟ ದಿಲೀಪ್ ಕುಮಾರ್ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್. ಜೀವಮಾನದ ಪ್ರಶಸ್ತಿ ಹತ್ತು ಲಕ್ಷ ರು., ಪ್ರಶಸ್ತಿ ಪತ್ರ ಮತ್ತು ಶಾಲನ್ನು ಒಳಗೊಂಡಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗಳಿಸಿದವರಿಗೆ ಹತ್ತು ಲಕ್ಷ ರು., ಸ್ವರ್ಣ ಕಮಲ ಮತ್ತು ಶಾಲನ್ನು ನೀಡಲಾಗುತ್ತದೆ.

ಮಲಯಾಳಂನ 'ಪುಲಿಜನ್ಮಂ' ಚಿತ್ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಸ್ವರ್ಣ ಕಮಲ, ನಿರ್ಮಾಪಕ ನಿರ್ದೇಶಕರಿಗೆ ತಲಾ ಎರಡೂವರೆ ಲಕ್ಷ ರು. ನೀಡಲಾಗುತ್ತದೆ. ಅತ್ಯುತ್ತಮ ಮನರಂಜನಾತ್ಮಕ ಚಿತ್ರಕ್ಕೆ ನೀಡುವ ಪ್ರಶಸ್ತಿ ವಿಧು ವಿನೋದ್ ಚೋಪ್ರಾ ನಿರ್ಮಾಣದ 'ಲಗೇ ರಹೋ ಮುನ್ನಾ ಭಾಯ್' ಹಿಂದಿ ಚಿತ್ರ ಪಡೆದುಕೊಂಡಿದೆ. ಬಂಗಾಳಿ ಚಿತ್ರ ನಟ ಸೌಮಿತ್ರ ಚಟರ್ಜಿ 'ಪೊಡೋಖೆಪ್' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 'ಪರುತ್ತಿ ವೀರನ್' ಚಿತ್ರಕ್ಕಾಗಿ ತಮಿಳು ಚಿತ್ರನಟಿ ಪ್ರಿಯಾಮಣಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ 'ಟ್ರಾಫಿಕ್ ಸಿಗ್ನಲ್' ಚಿತ್ರದ ನಿರ್ದೇಶಕ ಮಧುರ್ ಭಂಡಾರಕರ್ ಅವರ ಪಾಲಾಗಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಅತ್ಯುತ್ತಮ ನಟಿ ಪ್ರಿಯಾಮಣಿ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada