For Quick Alerts
  ALLOW NOTIFICATIONS  
  For Daily Alerts

  ಭಾರತಿ ಯಾವತ್ತೂ ಹೀಗೆ ಕಟುವಾಗಿ ಮಾತನಾಡಿದವರಲ್ಲ, ಆದರೆ ಕಳೆದ ಭಾನುವಾರ ಸಂಜೆ...

  By Staff
  |

  ‘ಸೂರ್ಯವಂಶ ’ ಚಿತ್ರದ ರಜತ ಮಹೋತ್ಸವ ಸಮಾರಂಭಕ್ಕೆ ನಾಯಕ ವಿಷ್ಣುವರ್ಧನ್‌ ಬಂದಿರಲಿಲ್ಲ. ಐವತ್ತು ದಿನ ಸಿನಿಮಾ ಓಡಿದ್ದಕ್ಕೇ ಸಮಾರಂಭ ಮಾಡುವ ಚಾಳಿ ನಮ್ಮಲ್ಲಿ ಹೆಚ್ಚಾಗುತ್ತಿದೆ. ನೂರು ದಿನ ಓಡಿದರಂತೂ ಹಂಚಿಕೆದಾರರೂ ಅಭಿಮಾನಿಗಳೂ ತಾವೇ ಉತ್ಸವ ಆಚರಿಸುವುದಕ್ಕೆ ಮುಂದೆ ಬರುತ್ತಾರೆ. ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ, ಬಹುಶಃ ಒಡಹುಟ್ಟಿದವರು ಚಿತ್ರದ ನಂತರ ಯಾವ ಚಿತ್ರವೂ ಇಪ್ಪತ್ತೆೈದು ವಾರ ಓಡಿದ ಉದಾಹರಣೆಯೂ ಇಲ್ಲ.

  ಹಾಗೆ ಇದುವರೆಗೆ ನಾಯಕ ನಟನ ಗೈರುಹಾಜರಿಯಲ್ಲಿ ಯಾವುದೇ ಚಿತ್ರದ ರಜತ ಮಹೋತ್ಸವ ನಡೆದಿರಲಿಕ್ಕಿಲ್ಲ. ಪ್ರಶಸ್ತಿ ವಿಜೇತರು ಕಾರ್ಯಕ್ರಮಕ್ಕೆ ಬಾರದೇ ಉಳಿದರಬಹುದು. ಆದರೆ ನಾಯಕ ನಟರು ರಜತ ಮಹೋತ್ಸವಕ್ಕೆ ಬಾರದೇ ಉಳಿದ ಉದಾಹರಣೆಯಿಲ್ಲ.

  ಈ ಹಿನ್ನೆಲೆ ನೋಡಿದಾಗ , ಸೂರ್ಯವಂಶ ರಜತ ಮಹೋತ್ಸವಕ್ಕೆ ವಿಷ್ಣು ವರ್ಧನ್‌ ಬಾರದೇ ಇದ್ದುದು ಹಲವು ಪ್ರಶ್ನೆಗಳಿಗೆ ನೆಪವಾಗಿದೆ. ಒಂದು ತಿಂಗಳ ಹಿಂದೆ ಚಿತ್ರದ ನಿರ್ಮಾಪಕ ಮಾಜಿ ಪ್ರಧಾನಿ ದೇವೇಗೌಡರ ಮಗ ಎಚ್‌.ಡಿ. ಕುಮಾರ ಸ್ವಾಮಿ, ಪತ್ರಿಕೆಗಳಲ್ಲಿ ರಜತ ಮಹೋತ್ಸವ ಕಾರ್ಯಕ್ರಮದ ಕುರಿತು ಜಾಹೀರಾತು ನೀಡಿದಾಗಲೇ ವಿಷ್ಣು ನಿಲುವು ಅರೆ ಬರೆ ವ್ಯಕ್ತವಾಗಿತ್ತು. ಆ ಜಾಹೀರಾತು ಕೂಡ ವಿಷ್ಣು ವರ್ಧನ್‌ಗೆ ನೋವುಂಟು ಮಾಡಿರಲಿಕ್ಕೂ ಸಾಕು. ಯಾಕೆಂದರೆ ‘ ಗಲಾಟೆ ಅಳಿಯಂದ್ರು ’ ಚಿತ್ರದ ಕ್ಯಾಸೆಟ್‌ ರಿಲೀಸ್‌ ಸಮಾರಂಭಕ್ಕೆ ಎಲ್ಲಿಲ್ಲದ ಮಹತ್ವವಿದ್ದ ಆ ಜಾಹೀರಾತಿನ ಕೆಳಗಿನ ನಾಲ್ಕೈದು ಸಾಲುಗಳಲ್ಲಿ ಸೂರ್ಯವಂಶದ ರಜತ ಮಹೋತ್ಸವವೂ ನಡೆಯಲಿದೆ ಎಂಬ ಸುದ್ದಿಯಿತ್ತು. !

  ಅದನ್ನು ನೋಡುತ್ತಲೇ ವಿಷ್ಣು ಸಿಟ್ಟಾದ್ದಕ್ಕೆ ಕಾರಣವಿದೆ. ಸೂರ್ಯವಂಶ ಶತದಿನೋತ್ಸವ ಆಚರಿಸಿ ವರ್ಷವಾಗುತ್ತಾ ಬಂದಿದೆ. ಶತದಿನೋತ್ಸವ ಕಾರ್ಯಕ್ರಮ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು ಕೂಡ. ಈ ನಡುವೆ ಚುನಾವಣೆ ಬಂತು. ನಿರೀಕ್ಷೆಯಂತೆ ಕುಮಾರಸ್ವಾಮಿ ಸೋತರು. ಆರಂಭದಲ್ಲಿ ಚುನಾವಣೆ ಕಾವು, ನಂತರ ಸೋಲಿನ ನೋವು ಶತದಿನೋತ್ಸವ ಮುಂದೆ ಹೋಗುವುದಕ್ಕೆ ನೆಪವಾಯಿತು.

  ಚುನಾವಣೆಯಲ್ಲಿ ಸೋತದ್ದಕ್ಕೂ ಶತ ದಿನೋತ್ಸವಕ್ಕೂ ಏನು ಸಂಬಂಧ ? ಯಾವ ಕಾರ್ಯಕ್ರಮ ಯಾವಾಗ ನಡೀಬೇಕೋ ಆಗಲೇ ನಡೀಬೇಕು. ವೈಯಕ್ತಿಕ ಕಾರಣಗಳನ್ನು ಒಡ್ಡಿ ಅದನ್ನು ಮುಂದೂಡಬಾರದು. ಎಂದು ನಂಬಿದ ವಿಷ್ಣು ಅದರ ಗೋಜಿಗೆ ಹೋಗುವುದನ್ನೇ ಬಿಟ್ಟಿದ್ದರು. ಈ ನಡುವೆ ಕುಮಾರಸ್ವಾಮಿ ನಿರ್ಮಾಣದ ದಿನೇಶ್‌ಬಾಬು ನಿರ್ದೇಶನದ ಪ್ರೇಮೋತ್ಸವ ಇನ್ನಿಲ್ಲದಂತೆ ಸೋತಿತು. ಹೀಗಾಗಿ ವಿಷ್ಣು ಮತ್ತು ಕುಮಾರಸ್ವಾಮಿ ನಡುವೆ ಒಂದು ಕಂದರವೇ ಸೃಷ್ಠಿಯಾಯಿತು. ಈ ನಡುವೆ ಒಂದೇ ಖರ್ಚಿನಲ್ಲಿ ಕಾರ್ಯಕ್ರಮ ಮಾಡೋಣ ಅಂದುಕೊಂಡ ಸ್ವಾಮಿ ಜಾಹೀರಾತಿನಿಂದ ವಿಷ್ಣುಗಾದ ನೋವಿನ ನಿವಾರಣೆಗೆಂದು ನಂತರ ಫುಲ್‌ ಪೇಜ್‌ ಜಾಹೀರಾತು ಕೊಡಲಾರಂಭಿಸಿದರು. ಹಾಗಾಗಿಯೂ ವಿಷ್ಣು ನಿಲುವು ಬದಲಾಗಲಿಲ್ಲ. ಅವರು ಕಾರ್ಯಕ್ರಮಕ್ಕೆ ಬರೋದಿಲ್ಲ ಅನ್ನೋದು ಹೆಚ್ಚು ಕಡಿಮೆ ಖಚಿತವಾಗಿತ್ತು.

  ಆದರೆ ನಿನ್ನೆ (11-6-2000) ನಡೆದ ಸೂರ್ಯವಂಶ ರಜತ ಮಹೋತ್ಸವಕ್ಕೆ ವಿಷ್ಣು ವರ್ಧನ್‌ ಪರವಾಗಿ ಭಾರತಿ ಬಂದಿದ್ದರು. ಯಜಮಾನರ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಹಾರ್ದಿಕವಾಗಿ ನಾಲ್ಕು ಮಾತನಾಡಿದರು. ಆ ಮಾತಿನ ಸಾರಾಂಶ ಇದು :

  ನಾನು ನಿಮ್ಮ ಮುಂದೆ ನಿಂತಿದ್ದೇನೆ ಅಂದರೆ ನನ್ನ ಯಜಮಾನರು ಬಂದಿಲ್ಲ ಅಂತಲೇ ಅರ್ಥ. ಅವರು ದೂರದೂರಲ್ಲಿ ಶೂಟಿಂಗ್‌ನಲ್ಲಿ ದ್ದಾರೆ. ಅಂಥ ದೊಡ್ಡ ಕಲಾವಿದರಿಗೆ ಒಂದು ದಿನದ ಶೂಟಿಂಗ್‌ ರದ್ದುಪಡಿಸಿ ಬರುವುದು ಕಷ್ಟವೇನಲ್ಲ. ಬರುತ್ತೇನೆ ಅಂತ ಮಾತುಕೊಟ್ಟು ಬರದೇ ಇರುವ ಜಾಯಮಾನ ಅವರದಲ್ಲ. ಅವರು ಯಾವತ್ತೂ ಮಾತಿಗೆ ತಪ್ಪಿದವರೂ ಅಲ್ಲ.

  ಅಂದ ಮೇಲೆ ಅವರಿಗೆ ಇಲ್ಲಿಗೆ ಬರೋದಕ್ಕೆ ಇಷ್ಟವಿರಲಿಲ್ಲ ಎಂದೇ ಅರ್ಥ. ನಿಜ ಹೇಳಬೇಕೆಂದರೆ ಅವರಿಗೆ ಇಲ್ಲಿ ಕಾರ್ಯಕ್ರಮ ನಡೆಯೋದೇ ಗೊತ್ತಿರಲಿಲ್ಲ. ಯಾರನ್ನಾದರೂ ಮನೆಗೆ ಊಟಕ್ಕೆ ಕರೆಯೋದರಲ್ಲಿ ಎರಡು ವಿಧ. ಒಂದು : ನಾವೊಂದು ಔತಣ ಕೂಟ ಕೂಟ ಇಟ್ಟು ಕೊಂಡಿದ್ದೇವೆ. ನೀವು ಬಂದರೆ ಸಂತೋಷವಾಗುತ್ತದೆ. ಯಾವಾಗ ತಮಗೆ ಬಿಡುವಿದೆ ಹೇಳಿದರೆ ಅದೇ ದಿನ ಇಟ್ಟುಕೊಳ್ಳೋಣ ಎನ್ನುವುದು. ಎರಡನೆಯದು : ಅಡಿಗೆ ಮಾಡಿಟ್ಟಿದ್ದೀವಿ. ಇಷ್ಟವಿದ್ದರೆ ಬರಬಹುದು ಅಂತ ಕರೆಯೋದು. ಇಲ್ಲಿ ಎರಡನೆಯದು ಆಗಿದೆ. ಹಾಗಾಗಿ ಅವರು ಬಂದಿಲ್ಲ !

  ಇಲ್ಲಿ ಗಮನಿಸಬೇಕಾದ ಅಂಶಗಳು ನಾಲ್ಕು :

  * ಭಾರತಿ ಯಾವತ್ತೂ ಹೀಗೆ ಕಟುವಾಗಿ ಮಾತನಾಡಿದವರಲ್ಲ.

  *ವಿಷ್ಣುವರ್ಧನ್‌ರನ್ನು ಕರೆಯದೇ ಕುಮಾರಸ್ವಾಮಿ ಕಾರ್ಯಕ್ರಮದ ದಿನಾಂಕ ಗೊತ್ತು ಮಾಡಿದರು ಎನ್ನುವುದು ನಂಬುವ ಹಾಗಿಲ್ಲ.

  *ವಿಷ್ಣು ತಮ್ಮನ್ನು ಕರೆದಿಲ್ಲ ಎಂದು ಯಾವತ್ತೂ ಬಾರದೇ ಕುಳಿತವರಲ್ಲ .

  *ಇಂಥದ್ದೊಂದು ಹೇಳಿಕೆ ಭಾರತಿ ಬಾಯಿಯಿಂದ ಹತ್ತು ವರ್ಷದ ಹಿಂದೆ ಬಂದಿದ್ದರೆ ಅಭಿಮಾನಿಗಳು ಸುಮ್ಮನಿರುತ್ತಿರಲಿಲ್ಲ .

  ಹಾಗಿದ್ದೂ ಯಾಕೆ ಭಾರತಿ ನಿಷ್ಠುರವಾಗಿ ಮಾತನಾಡಿದರು? ವಿಷ್ಣು ಬಾರದೇ ಉಳಿದದ್ದೇಕೆ ?ಅವರನ್ನು ಅಷ್ಟೊಂದು ನೋಯಿಸುವಂಥದ್ದೇನಾಗಿತ್ತು ? ಇವೆಲ್ಲದರ ಬೇರು ಎಲ್ಲಿಯ ತನಕ ಚಾಚಿದೆ ? ಈ ಅಸಮಾಧಾನದ ಹಿಂದೆ ಹೊಗೆಯಾಡುತ್ತಿರುವ ಇನ್ನಿತರ ಅಂಶಗಳು ಯಾವುವು ?

  ಕೆಲವರು ಹೇಳುವ ಹಾಗೆ, ಇದು ಕೇವಲ ಪತ್ರಿಕಾ ಜಾಹೀರಾತಿನ ಮಾತಲ್ಲ. ಕುಮಾರಸ್ವಾಮಿಯವರ ಸ್ವತಃ ಮಾಡದೇ ಇದ್ದರೂ ಅವರ ಸುತ್ತಲೂ ಇರುವ ಮಂದಿಯ Take it for granted ಮನೋಭಾವದ ಪ್ರತಿಬಿಂಬ. ಇಲ್ಲದೇ ಹೋದರೆ, ರಜತ ಮಹೋತ್ಸವಕ್ಕಿಂತ ಯಕಶ್ಚಿತ್‌ ಕ್ಯಾಸೆಟ್‌ ರಿಲೀಸು ಹೇಗೆ ಮುಖ್ಯವಾಗುತ್ತಿತ್ತು. ಅಷ್ಟಕ್ಕೂ ಕ್ಯಾಸೆಟ್‌ ರಿಲೀಸ್‌ ನಿರ್ಮಾಪಕರ ತಲೆನೋವಲ್ಲ. ಅದನ್ನು ಮಾಡಬೇಕಾದವರು ಕ್ಯಾಸೆಟ್‌ ಸಂಸ್ಥೆಗಳು, ಈ ಸಂದರ್ಭದಲ್ಲಿ ಮ್ಯಾಗ್ನಾ ಸೌಂಡ್‌. ರಜತ ಮಹೋತ್ಸವ ನಿರ್ಮಾಪಕರ ಸಂಭ್ರಮ. ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾವಾಗಿದೆ. ಸ್ವತಃ ಸ್ವಾಮಿಯವರೇ ಕ್ಯಾಸೆಟ್‌ ಬಿಡುಗಡೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದೇ ಹೊತ್ತಿಗೆ ರಜತ ಮಹೊತ್ಸವ ಮಾಡೋಣ ಅಂತ ಅಂದು ಕೊಂಡಿದ್ದಾರೆ. ಹೀಗೆ ಅಡಿಗೆ ಮಾಡಿಟ್ಟು ವಿಷ್ಣುವರ್ಧನ್‌ನರನ್ನು ಊಟಕ್ಕೆ ಕರೆದಿದ್ದಾರೆ.

  ತಮಾಷೆಯ ಪರಮಾಧಿಯೆಂದರೆ ಇದೇ ತಿಂಗಳ ಇಪ್ಪತ್ತನಾಲ್ಕರಂದು ನಡೆಯುತ್ತಿರುವ ‘ಸೂರಪ್ಪ ’ ಚಿತ್ರದ ಐವತ್ತನೇ ದಿನದ ಸಮಾರಂಭಕ್ಕೆ ವಿಷ್ಣುವರ್ಧನ್‌ ಬರಲೊಪ್ಪಿರುವುದು. ಇಪ್ಪತ್ತೆೈದು ವಾರಕ್ಕಿಂತ ಐವತ್ತೇ ಮುಖ್ಯವಾಯಿತೇ ಅನ್ನುವಂತಿಲ್ಲ. ಕರೆಯುವ ರೀತಿಯಷ್ಟೇ ಮುಖ್ಯ.

  ಈ ವಿಷ್ಣು ನಿರಾಕರಣೆ, ಭಾರತಿ ವಿವರಣೆ ಎಲ್ಲವೂ ಇವತ್ತಿನ ಸಂದಭ ರ್ದಲ್ಲಿ ತೀರ ಅನಗತ್ಯ ಅನ್ನುವವರೂ ಇದ್ದಾರೆ. ಲಕ್ಷಾಂತರ ಜನ ಮೆಚ್ಚಿದ ಆ ಕಾರ್ಯಕ್ರಮ ಒಂದು ಮಾತಿನ ಕಿಡಿಯಿಂದ ಭಸ್ಮವಾಗಬಹುದಾಗಿತ್ತು. ವಿಷ್ಣು ಅಭಿಮಾನಿಗಳ ಸಂಖ್ಯೆ ಅಷ್ಟೊಂದು ಇದ್ದು ಬಿಟ್ಟಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು. ಇಷ್ಟಕ್ಕೂ ಅಲ್ಲಿ ವಿಷ್ಣು ಬರಲಿಲ್ಲ ಎನ್ನುವುದಕ್ಕೆ ತಲೆಕೆಡಿಸಿಕೊಂಡವರು ಯಾರೂ ಇರಲಿಲ್ಲ. ಆ ಬಗ್ಗೆ ಒಂದೆರಡು ಧ್ವನಿಗಳಷ್ಟೇ ಕೇಳಿ ಬಂದವು.

  ಈ ಜಗಳದ ಮೂಲ ‘ಬ್ರಾಹ್ಮಣ ಅಬ್ರಾಹ್ಮಣ ಜಗಳ’ ಎನ್ನುವರೂ ಇದ್ದಾರೆ. ಹಾಗೆ ನೋಡಿದರೆ ಕುಮಾರಸ್ವಾಮಿಯವರ ಮೂರನೆಯ ಚಿತ್ರದಲ್ಲಿ ವಿಷ್ಣು ಅಭಿನಯಿಸಬೇಕಾಗಿತ್ತು. ಎಸ್‌. ನಾರಾಯಣ್‌ ಅಥವಾ ಮಹೇಂದರ್‌ ನಿರ್ದೇಶನದ ಆ ಚಿತ್ರ ಈಗಾಗಲೇ ಸೆಟ್ಟೇರಬೇಕಾಗಿತ್ತು. ಆದರೆ ಕೆರೆಗೆ ಹಾರ ಕೈಗೂಡಲಿಲ್ಲ. ವಿಷ್ಣುವರ್ಧನ್‌ ಎಸ್‌. ನಾರಾಯಣ್‌ ಚಿತ್ರದಲ್ಲಿ ನಟಿಸಕೂಡದೆಂದು ನಿರ್ಧರಿಸಿ ಬಹಳೇ ದಿನಗಳಾಗಿವೆ. ಎಸ್‌. ನಾರಾಯಣ್‌ ಚಿತ್ರಕ್ಕೆ ಬಂದ ಪ್ರಶಸ್ತಿಯನ್ನು ಸ್ವೀಕರಿಸುವ ಗೋಜಿಗೂ ಅವರು ಹೋಗಲಿಲ್ಲ .

  ಅಂತೂ ಒಳಗೊಳಗಿನ ಅಸಮಾಧಾನ ಹೊರಗೆ ಬಂದಿದೆ. ನಡಯಬಾರದ ಘಟನೆಗಳು ನಡೆಯುತ್ತಿವೆ. ಇಲ್ಲಿ ತಪ್ಪು ಯಾರದು ಎನ್ನುವುದಕ್ಕಿಂತ ಅಭಿಮಾನಿಗಳಿಗೆ ನಿರಾಸೆಯಾಗಿದೆ ಅನ್ನುವುದು ಈ ನಿರಾಸೆ ಚಿತ್ರಗಳು ಸೋಲುತ್ತಿರುವ ಈ ಸಂದರ್ಭದಲ್ಲಿ ಚಿತ್ರ ರಸಿಕರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಬಹುದು ಎನ್ನುವುದೂ ನಿಜ.

  ಅದೆಲ್ಲ ಸರಿ ಸರ್‌. ಆದರೆ ವಿಷ್ಣು ನಿಜವಾಗಿಯೂ ಯಾಕೆ ಬರಲಿಲ್ಲ ಹೇಳಿ?

  ಇವೆಲ್ಲವನ್ನೂ ಮೀರಿದ ಕಾರಣವೊಂದು ಅವರನ್ನು ತಡೆಹಿಡಿದಿತ್ತೇ ?

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X