»   » ಕನ್ನಡ ಚಿತ್ರರಂಗ-2003 : ವಿವಾದಕ್ಕೆ‘ಬರ’ ಬರಲಿಲ್ಲ !

ಕನ್ನಡ ಚಿತ್ರರಂಗ-2003 : ವಿವಾದಕ್ಕೆ‘ಬರ’ ಬರಲಿಲ್ಲ !

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ


ವಿವಾದದ ಟಿಪ್ಪಣಿಗಳು :

 1. ಫಣಿ ರಾಮಚಂದ್ರ ನಿರ್ದೇಶನದ ಕಿರುತೆರೆ ಧಾರಾವಾಹಿ ‘ದರಿದ್ರ ಲಕ್ಷ್ಮಿಯರು’ ಹೆಸರಿಗೆ ವಿಷ್ಣುವರ್ಧನ್‌ ತಗಾದೆ. ಬಲು ಮಾತಿನ ಚಕಮಕಿಯ ನಂತರ ಫಣಿ ಸೋತರು. ದರಿದ್ರ ಲಕ್ಷ್ಮಿಯರಿಗೆ ಸಾಹಸ ಲಕ್ಷ್ಮಿಯರು ಅಂತ ಮರು ನಾಮಕರಣ ಮಾಡಿದರು.
 2. ಐಎಎಸ್‌ ಅಧಿಕಾರಿ ಕೆ.ಶಿವರಾಂ ಗೇಮ್‌ ಎಂಬ ಸಿನಿಮಾವನ್ನು ಗುಟ್ಟಾಗಿ ಮಾಡಿದರು. ಇದಕ್ಕೆ ಅವರ ಅಧಿಕಾರವನ್ನು ಸಮರ್ಥವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ !
 3. ಲಂಕೇಶ್‌ ಪುತ್ರ ಪತ್ರಕರ್ತ ಇಂದ್ರಜಿತ್‌ಗೆ ಸುದೀಪ್‌ ಎಚ್ಚರಿಕೆ, ತನ್ನ ಇಮೇಜಿಗೆ ಧಕ್ಕೆ ತರುತ್ತಿದ್ದಾರೆ ಎಂದು ನೇರ ಆರೋಪ. ಇಂದ್ರಜಿತ್‌ ನಿರ್ದೇಶಿಸಿದ ‘ಲಂಕೇಶ್‌ ಪತ್ರಿಕೆ’ ಚಿತ್ರಕ್ಕೆ ಸುದೀಪ್‌ ಕಾಲ್‌ಷೀಟ್‌ ಕೊಡಲಿಲ್ಲ. ಅಲ್ಲಿಂದ ಶುರುವಾದ ಕಿರಿಕ್ಕು ಕೊನೆಗೆ ಬೀದಿಗೆ ಬಂತು. ತುಂಟಾಟ ಚಿತ್ರದಲ್ಲಿ ಒಂದೇ ಒಂದು ಹಾಡಿನಲ್ಲಿ ಸುದೀಪ್‌ ನಟಿಸಿದ್ದರು. ಆ ಕ್ಷಣದಲ್ಲಿ ಸುದೀಪ್‌- ಇಂದ್ರಜಿತ್‌ ಪರಸ್ಪರ ಬೆನ್ನು ಚಪ್ಪರಿಸುತ್ತಿದ್ದದ್ದು ಲಂಕೇಶ್‌ ಪತ್ರಿಕೆಯ ಮೂಲಕ ಜಾಹೀರಾಗಿತ್ತು. ಆಮೇಲೆ ಅದಲು ಬದಲು ಕಂಚಿ ಕದಲು. ಸದ್ಯಕ್ಕೆ ಸುದೀಪ್‌ ಹಾಗೂ ಇಂದ್ರಜಿತ್‌ ತಂತಮ್ಮ ಪಾಡಿಗೆ ತಾವಿದ್ದಾರೆ.
 4. ಬೇಸಗೆ ಬಿಸಿಯೇರುತ್ತಿದ್ದಂತೆ ಹೊಸ ಮುಖಗಳೂ ಬಿಸಿಬಿಸಿ ಕಾದಾಟಕ್ಕೆ ಇಳಿದವು. ಮೀಸೆ ಚಿಗುರಿದಾಗ ಎಂಬ ಚಿತ್ರದಲ್ಲಿ ಶ್ರೀ ಹಾಗೂ ದುರ್ಗಾಶೆಟ್ಟಿ ಎಂಬಿಬ್ಬರು ನಟೀಮಣಿಗಳು ಮುಖ- ಮೈ ದೋರಿದ್ದರು. ದುರ್ಗಾಶೆಟ್ಟಿ ಹೆಚ್ಚಾಗಿ ಮೈದೋರಿದ ಕಾರಣ ಆಕೆಯೇ ಚಿತ್ರದ ನಾಯಕಿ ಅಂತ ಪುಕಾರೆದ್ದಿದೆ, ಆದರೆ ನಾಯಕಿ ಅವಳಲ್ಲ ತಾನು ಎಂಬುದು ಶ್ರೀ ವಾದ. ಇದನ್ನು ಆಕೆ ಪತ್ರಕರ್ತರ ಮುಂದೆಯೇ ಒದರಿದ್ದೂ ಆಗಿತ್ತು. ಅಷ್ಟರಲ್ಲಿ ನಿರ್ದೇಶಕ ಪ್ರವೀಣ್‌ ನಾಯಕ್‌ ಮಧ್ಯೆ ಪ್ರವೇಶಿಸಿ ಶ್ರೀ ಅಧಿಕ ಪ್ರಸಂಗಿ ಅನ್ನುವ ಮೂಲಕ ಕಿರಿಕ್ಕಿಗೆ ತೆರೆಬಿತ್ತು. ತೆರೆಕಂಡ ಚಿತ್ರಕ್ಕೂ ಅಷ್ಟೇ ಬೇಗ ತೆರೆ ಬಿತ್ತು !
 5. ಇದು ಸೆಟ್ಟಿನಲ್ಲೇ ಕಿತ್ತಾಟದ ಕಥೆ. ಕಾಣದಂತೆ ಮಾಯವಾಗಿದ್ದ ಮುದ್ದು ಮೂತಿಯ ವಿಜಯಲಕ್ಷ್ಮಿ ಮತ್ತೆ ಕನ್ನಡ ಚಿತ್ರಕ್ಕೆ ಬಂದಿದ್ದರು. ಚಿತ್ರದ ಹೆಸರು ಜೋಗುಳ. ಆದರೆ ನಿರ್ಮಾಪಕ ಕಂ ನಾಯಕ ಬಿ.ಸಿ.ಪಾಟೀಲ್‌ ತೊಟ್ಟಿಲು ತೂಗುವ ಆಸಾಮಿಯಲ್ಲ. ಕೌರವನ ಅಪರಾವತಾರ. ತಾವು ಹೇಳಿದಂತೆ ವಿಜಯಲಕ್ಷ್ಮಿ ಕೇಳಬೇಕೆಂಬುದು ಪಾಟೀಲರ ಪಾಳೇಗಾರಿಕೆ. ನಾನು ನಿಮ್ಮ ಆಳಲ್ಲ, ನಿರ್ದೇಶಕರೇ ನನ್ನ ಗುರು ಅಂತ ವಿಜಯಲಕ್ಷ್ಮಿ ಓಬವ್ವನ ಸ್ಟೈಲಲ್ಲಿ ರಿವರ್ಸ್‌ ಸ್ವಿಂಗ್‌ ಮಾಡಿದರು. ಪಾಪ, ಹೆಂಗಸಿನ ಮುಂದೆ ಕೌರವ ತೊಡೆ ತಟ್ಟುವಂತಾಯಿತು. ಇದನ್ನು ಹೊರತುಪಡಸಿದಂತೆ ಚಿತ್ರ ಸದ್ದು ಮಾಡಲೇ ಇಲ್ಲ.
 6. ಮಳೆಯಂತೂ ಬರಲಿಲ್ಲ, ‘ಆ್ಯಸಿಡ್‌ ಮಳೆ’ಗೆ ಬರವಿಲ್ಲ. ಮನ್ಮಥ ರಾಜ ಉರುಫ್‌ ಮದನ್‌ ಮಲ್ಲು ಅರ್ಥಾತ್‌ ಮದನ್‌ ಪಟೇಲ್‌ರ ಓಕೆ ಸಾರ್‌ ಓಕೆ ಎಂಬ ಚಿತ್ರದ್ದು ದೊಡ್ಡ ರಾದ್ಧಾಂತ. ದಾಮಿನಿ, ರಶ್ಮಿ , ಅನು ಹಾಗೂ ಮೋನಿಕಾ ಈ ಚಿತ್ರದ ತಾರಾಮಣಿಗಳು. ದಾಮಿನಿಯಂತೆಯೇ ನೀನು ಮಾಡಬೇಕು ಅನ್ನೋದು ರಶ್ಮಿಗೆ ಮದನ್‌ ಮಾಡಿದ ತಾಕೀತು. ತುಂಡು ಬಟ್ಟೆ ಸಾಕು ನಿನ್ನ ಮಾನ ಮುಚ್ಚೋಕೆ ಅನ್ನೋದು ಮದನ್‌ ಸಿದ್ಧಾಂತ. ಇದನ್ನು ಕೇಳಿ ರಶ್ಮಿ ಮಂಡಿ ಮುದುರಿಕೊಂಡು ಕೂತರು. ಪಕ್ಕದಲ್ಲಿದ್ದ ಮೋನಿಕಾಗೂ ಇದೇ ಸ್ಟೇಟ್‌ಮೆಂಟು. ರಶ್ಮಿ ಜಗ್ಗದ ಕಾರಣಕ್ಕೆ ‘ನಿನ್ನ ಮೋರೆಗೆ ಆ್ಯಸಿಡ್‌ ಹಾಕ್ತೀನಿ’ ಅಂತ ಥೇಟ್‌ ಆ್ಯಸಿಡ್‌ ರಾಜನ ಧಾಟಿಯಲ್ಲಿ ಹೇಳಿದ ಮದನ ತನ್ನ ಹಳೆಯ ರೌಡಿ ಲೀಲೆಗಳನ್ನೂ ಸೆಟ್ಟಿನಲ್ಲೇ ಬಿಚ್ಚಿಟ್ಟಿದ್ದನ್ನು ಸದ್ಯ ಯಾರೂ ಸಿನಿಮಾ ಮಾಡಲು ಹೋಗಲಿಲ್ಲ.
  ರಶ್ಮಿ ಹಾಗೂ ಮೋನಿಕಾ ಅಳಲಿಗೆ ಸ್ಪಂದಿಸಿದ ದುಂಬಿ ಆದರ್ಶನಿಗೆ ಫೋನಾಯಿಸಿದ ಮದನ್‌ ‘ಐ ವಿಲ್‌ ಕಿಲ್‌ ಯೂ’ ಅಂತ ಅಂದಿದ್ದು ಕಿರಿಕ್ಕಿನ ಬೆಂಕಿಗೆ ಸುರಿದ ತುಪ್ಪ. ಕೊನೆಗೆ ಎಲ್ಲರೂ ಪತ್ರಕರ್ತರ ಸಮ್ಮುಖದಲ್ಲಿ ಕೂತು ಮಾತಾಡಿದರು. ಕೊನೆಗೆ ಮದನ್‌ ತಲೆ ಕೆರೆದುಕೊಂಡು ಸುಮ್ಮನಾದರು.
 7. ‘ಪಾಂಡುರಂಗ ವಿಠಲ’ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಡಿ.ರಾಜೇಂದ್ರ ಬಾಬು ಬಗ್ಗೆ ರವಿಚಂದ್ರನ್‌ ಎಕ್ಕಾ ಮಕ್ಕಾ ಟೀಕಿಸಿದರು. ಅಶಿಸ್ತು, ಭೋಜನ ಪ್ರೀತಿಯ ನಡುವೆ ಡಿ.ರಾ.ಬಾಬು ಸಿನಿಮಾ ಪ್ರೀತಿ ಗೋವಿಂದವಾಗಿದೆ ಅಂತ ನೇರವಾಗಿ ಆರೋಪಿಸಿ, ಅವರನ್ನು ಸಿನಿಮಾ ಸೆಟ್ಟಿನಿಂದ ಮನೆಗೆ ಕಳಿಸಿ, ತಾವೇ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡರು. ಆದರೂ ವಿಠಲ ಇನ್ನೂ ಕಣ್ಣು ಬಿಟ್ಟಿಲ್ಲ, ಚಿತ್ರ ಡಬ್ಬ ತುಂಬಿತೋ ಇಲ್ಲವೋ ಗೊತ್ತಿಲ್ಲ !
 8. ಸೇವಾ ಶುಲ್ಕದಲ್ಲಿ ನಮಗೂ ಪಾಲು ಕೊಡಿ ಅಂತ ನಿರ್ಮಾಪಕರು. ಕೊಡಲ್ಲ ಅಂತ ಪ್ರದರ್ಶಕರು. ಕೊನೆಗೆ ಸಿನಿಮಾನೇ ಕೊಡದಿದ್ದರೆ ಅದೇನು ತೋರಿಸುತ್ತೀರೋ ತೋರಿಸಿ ಅಂತ ನಿರ್ಮಾಪಕರು ತೊಡೆ ತಟ್ಟಿ, ಕೆಲವು ಸಿನಿಮಾಗಳನ್ನು ಹಿಂದಕ್ಕೆ ಪಡೆದರು. ರಾತ್ರೋರಾತ್ರಿ ಚಿತ್ರಮಂದಿರಗಳಿಂದ ಡಬ್ಬಗಳು ಎತ್ತಂಗಡಿಯಾದವು. ಪ್ರೀತಿ ಪ್ರೇಮ ಪ್ರಣಯ ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್‌ ಪರವಾಗಿ ತಂಗಿ ಗೌರಿ ಕೋರ್ಟಿನ ಮೆಟ್ಟಿಲು ಹತ್ತಿ, ಓಡುತ್ತಿರುವ ತಮ್ಮ ಸಿನಿಮಾ ನಿಲ್ಲಿಸಬಾರದೆಂದು ಫರ್ಮಾನು ಹೊರಡಿಸಿದರು.

  ಪ್ರದರ್ಶಕರ ವಿರುದ್ಧ ಒಂದಿಷ್ಟು ನಿರ್ಮಾಪಕರ ಎಗರಾಟ. ಹಾಗೆ ಎಗರಾಡಿದ ನಿರ್ಮಾಪಕರ ವಿರುದ್ಧವೇ ಇನ್ನು ಕೆಲವು ನಿರ್ಮಾಪಕರ ಕಾದಾಟ. ಕೊನೆಗೆ ನಿರ್ಮಾಪಕರ ಸಂಘವೇ ಒಡೆದು ಹೋಳಾಯಿತು. ವೇದಿಕೆ ಎಂಬ ‘ದ್ವಿತೀಯ ರಂಗ’ ರಚಿತವಾಯಿತು. ರಾಜಕಾರಣಿ ಎಚ್‌.ಡಿ.ಕುಮಾರ ಸ್ವಾಮಿ ಇದರ ಅಧ್ಯಕ್ಷ. ಪಾರ್ವತಮ್ಮ ರಾಜ್‌ಕುಮಾರ್‌ ವಿರುದ್ಧ ಕುಮಾರ ಸ್ವಾಮಿ ವಿರೋಧದ ದನಿಯೆತ್ತಿದ್ದು ದೊಡ್ಡ ಸುದ್ದಿಯಾಯಿತು.

 9. ಕೆಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ವಿನಿತಾ ಎಂಬ ನಟೀಮಣಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆಂಬ ಆರೋಪದ ಕಾರಣ ಪೊಲೀಸರ ಅತಿಥಿಯಾದರು.
 10. ಈ- ಟೀವಿಯಲ್ಲಿ ಪ್ರಸಾರವಾಗತೊಡಗಿದ ‘ಮೂಡಲ ಮನೆ’ ಧಾರಾವಾಹಿಯ ಟೈಟಲ್‌ ಗೀತೆಗೆ ಪ್ರತಿ ಎಪಿಸೋಡಿಗೂ ಹಣ ಕೊಡಬೇಕೆಂದು ಕವಿ ಚಂದ್ರಶೇಖರ ಕಂಬಾರ ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಅವರನ್ನು ಕೇಳಿದ್ದು, ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಂಥ ಪ್ರಸಂಗ.
 11. ಅಣ್ಣಾವ್ರ ಕುಟುಂಬದ ಮೇಲೆ ಕುಮಾರ ಸ್ವಾಮಿ ನೇರ ಆರೋಪ. ತಮ್ಮ ನಿರ್ಮಾಣದ ಚಿತ್ರ ಎತ್ತಂಗಡಿಗೆ ಸಂಚು ಎಂಬ ದೂರು. ರೌಡಿ ಅಳಿಯ ಚಿತ್ರದ ಸೆಟ್‌ನಲ್ಲಿ ಶಿವರಾಜ್‌ ಮಾತಿನ ತಿರುಗೇಟು. ತಮ್ಮ ನಿರ್ಮಾಣದ ರಕ್ತ ಕಣ್ಣೀರು ಚಿತ್ರವನ್ನು ಸುತಾರಾಂ ಎತ್ತಂಗಡಿ ಮಾಡಕೂಡದೆಂದು ಕೋರ್ಟಿಗೆ ಮುನಿರತ್ನ.
 12. ‘ಮೂಡಲ ಮನೆ’ ತನ್ನ ಕಾದಂಬರಿಯ ವಸ್ತು. ಅದನ್ನು ವೈಶಾಲಿ ಕಾಸರವಳ್ಳಿ ಕದ್ದಿದ್ದಾರೆ ಅಂತ ರೇಖಾ ಕಾಖಂಡಕಿ ಆರೋಪ. ಇದು ಸುಳ್ಳು ಆರೋಪ ಎಂಬುದು ವೈಶಾಲಿ ವಾದ.
 13. ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಸಮಾರಂಭಕ್ಕೆ ಹಿರೇಕೆರೂರಿನಲ್ಲಿ ಅಡ್ಡಿಪಡಿಸಿದ ನಾಯಕ ಕಂ ರಾಜಕಾರಣಿ ಬಿ.ಸಿ.ಪಾಟೀಲ್‌ ಬಂಧನ. ತಮ್ಮದು ಜನಪರ ಹೋರಾಟ ಎಂಬ ಸಮಜಾಯಿಷಿ. ಆ ಸದ್ದು ಈಗ ಸಾಕಷ್ಟು ಉಡುಗಿಹೋಗಿದೆ.
 14. ಮೈಸೂರು ದಸರೆಯ ಜಂಬೂಸವಾರಿ ವೇಳೆ ಚಾಮುಂಡಿ ಬೆಟ್ಟದಲ್ಲಿ ಕೆಲವು ಸ್ಥಳೀಯ ಪತ್ರಕರ್ತರು ಪುನೀತ್‌ ರಾಜ್‌ಕುಮಾರ್‌ ತಮ್ಮ ಮೇಲೆ ಹಲ್ಲೆ ಮಾಡಿದರು. ಅವರಿಗೆ ತಕ್ಕ ಶಾಸ್ತಿ ಮಾಡಿ ಅಂತ ಹಠಾತ್‌ ಧರಣಿ ಕೂತರು. ಸಾಕ್ಷಾತ್‌ ಎಸ್‌.ಎಂ.ಕೃಷ್ಣ ಬಂದು, ಸಮಾದಾನಿಸಿ ಅವರನ್ನು ಎಬ್ಬಿಸಿದರು. ಪೊಲೀಸರ ವರದಿ ಪುನೀತ್‌ ನಿರ್ದೋಷಿ ಅಂತ ಇತ್ತೀಚೆಗೆ ತೀರ್ಪಿತ್ತಿದೆ.
 15. ರೌಡಿ ಅಳಿಯ ಚಿತ್ರೀಕರಣದ ವೇಳೆ ಸ್ಟಂಟ್‌ ಕಲಾವಿದ ಜಾನಿಗೆ ನಂದಿಬೆಟ್ಟದಲ್ಲಿ ಗಂಭೀರ ಸ್ವರೂಪದ ಗಾಯ. ನಿರ್ಮಾಪಕರ ಮೇಲೆ ಜಾನಿ ಈ ಘಟನೆಯ ಕಾರಣಕ್ಕೆ ಹರಿಹಾಯ್ದರು.
ಪಾಂಡುವನ್ನು ಈಗ್ಯಾರೂ ಪಾಪ ಅನ್ನುವುದಿಲ್ಲ . ಸಿನಿಮಾ ಮಾಡ್ತೀನಿ ಎಂದು ಸಿಹಿಕಹಿ ಚಂದ್ರು ಜತೆ ಜಗಳಾಡಿಕೊಂಡು ಈ ಟೀವಿಯ ಪಾಪ ಪಾಂಡು ಧಾರಾವಾಹಿಗೆ ಕೈಕೊಟ್ಟ ಚಿದಾನಂದ್‌, ಆಮೇಲೆ ನಿರ್ಮಾಪಕ ಗೆಳೆಯರ ಜೊತೆ ಪಾಂಡುರಂಗ ಎನ್ನುವ ಧಾರಾವಾಹಿಯ ಮೂಲಕ ಉದಯ ಟೀವಿಯಲ್ಲಿ ಕಾಣಿಸಿಕೊಂಡರು. ಅದೇನಾಯ್ತೋ ಏನೋ, ಗೆಳೆಯ ನಿರ್ಮಾಪಕರ ಮೇಲೆ ಪೊಲೀಸ್‌ ಕಂಪ್ಲೇಂಟ್‌ ಕೊಡಬೇಕೆ ? ಕೊಲ್ತೀವಿ ಅಂದ್ರು ಅನ್ನೋದು ಆರೋಪ. ಸಿಹಿಕಹಿ ಚಂದ್ರು ಹಾಗೂ ಚಿದಾನಂದು ರಾಜಿ ಆಗಿದ್ದಾರೆ ಅನ್ನೋ ಸುದ್ದಿಯೂ ಇದೆ.

ಇಷ್ಟು ಸಾಕಲ್ವಾ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada