ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ By Two ಲವ್ ಚಿತ್ರದಲ್ಲಿ ಧನವೀರ್ ಮತ್ತು ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿಶಾ ವೆಂಕಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಕಥೆ:
ನಾಯಕ-ನಾಯಕಿ ಇಬ್ಬರಿಗೂ ಮನೆಯಲ್ಲಿ ಕೌಟುಂಬಿಕ ಸಮಸ್ಯೆ, ಇಬ್ಬರಿಗೂ ಪೋಷಕರ ಮೇಲೆ ಸಿಟ್ಟು. ಹಾಗಾಗಿ ಪ್ರೀತಿಸಲೇ ಬಾರದು, ಮದುವೆಯೇ ಆಗಬಾರದು ಎಂದುಕೊಂಡಿದ್ದಾರೆ. ಇಬ್ಬರ ಯೋಚನೆ, ಆಲೋಚನೆಯ ಮಾದರಿ ಒಂದೇ. ಪ್ರೀತಿಸಬಾರದು ಎಂದುಕೊಂಡಿದ್ದರೂ ಅವರಿಬ್ಬರು ಪ್ರೀತಿಸುತ್ತಾರೆ. ಮದುವೆ ಖುಷಿಯನ್ನು ಕಿತ್ತುಕೊಳ್ಳುತ್ತದೆ, ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತದೆ ಎಂಬ ಆತಂಕ ಅವರದ್ದು. ಅದಕ್ಕೆ ಅವರೊಂದು ಪ್ರಯೋಗಕ್ಕೆ ಮುಂದಾಗುತ್ತಾರೆ. ಪರಸ್ಪರ ಗಂಡ-ಹೆಂಡತಿಯರಂತೆ ಬಾಳಿ ಅದು ತಮಗೆ ಒಪ್ಪಿಗೆಯಾದರೆ ಮದುವೆಯ ತೀರ್ಮಾನ ಇಲ್ಲವಾದರೆ ಅವರವರ ದಾರಿ ಅವರಿಗೆ. ಇದಕ್ಕಾಗಿ ಮಗುವೊಂದನ್ನು ಸಹ 'ಅಡ್ಡದಾರಿಯಲ್ಲಿ' ಪಡೆದು ಸಾಕಲು ಆರಂಭಿಸುತ್ತಾರೆ.
ಮಗು ಅವರಿಬ್ಬರ ಜೀವನದಲ್ಲಿ ತರುವ ಬದಲಾವಣೆ ಏನು? ಪ್ರೀತಿ, ದಾಂಪತ್ಯದ ಬಗ್ಗೆ ಅವರಿಗಾಗುವ ಸಾಕ್ಷಾತ್ಕಾರವೇನು? ಎಂಬುದು ಚಿತ್ರದ ಮುಂದಿನ ಕಥೆ.