ಧರಣಿ ಮಂಡಲ ಮಧ್ಯದೊಳಗೆ ಸಿನಿಮಾವನ್ನು ಶ್ರೀಧರ್ ಷಣ್ಮುಖ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಪ್ರಸಿದ್ಧ ಜಾನಪದ ಗೀತೆಯಾದ ಪುಣ್ಯಕೋಟಿ ಗೀತೆಯ ಸಾಲಿನಿಂದ ಚಿತ್ರದ ಶೀರ್ಷಿಕೆಯನ್ನು ಆಯ್ದುಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ಗುಟ್ಟು ಸಿನಿಮಾ ಖ್ಯಾತಿಯ ನವೀನ ಶಂಕರ್ ಮತ್ತು ಐಶಾನಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಥೆ: ಬಾಕ್ಸರ್ ಚಾಂಪಿಯನ್ ಆಗಬೇಕೆಂದಿರುವ ಸಿನಿಮಾ ನಾಯಕ (ನವೀನ್ ಶಂಕರ್) ಮತ್ತು ಆತನ ಮಾದಕ ವ್ಯಸನಿ ಗೆಳತಿ ಶ್ರೇಯಾ (ಐಶಾನಿ ಶೆಟ್ಟಿ) ಇವರದು ಒಂದು ಕಥೆಯಾದರೆ, ಐದು ವರ್ಷಗಳ ನಂತರ ಮಗನನ್ನು ಬೆಂಗಳೂರಿಗೆ ಬರುತ್ತಿರುವ ಅಪ್ಪ-ಅಮ್ಮ ಹಾಗೂ ಅವರನ್ನು ನೋಡಲು ಕಾತುರನಾಗಿರುವ ಮಗ ಶಿವು (ಯಶ್ ಶೆಟ್ಟಿ) ಇನ್ನೊಂದು ಕಡೆ. ಭೂಗತಿ ಜಗತ್ತಿನ ಆಂಟನಿ ಮತ್ತು ಆತನ ಗ್ಯಾಂಗ್. ಪ್ರೀತಿಯಲ್ಲಿ ಸೋತು ಸಾಯಬೇಕೆಂದಿರುವ ಭಗ್ನ ಪ್ರೇಮಿ (ನಿತೇಶ್) ಹಾಗೂ ಅವನ ಸ್ನೇಹಿತ ಮರ್ಯಾದೆ ರಾಮಣ್ಣ (ಪ್ರಕಾಶ್) ಒಂದು ಕಡೆ. ವಿಚಿತ್ರ ವರ್ತನೆಯ ಪ್ಯಾರಾಚೂಟ್ (ಸಿದ್ದು ಮೂಲಿಮನಿ) ಹಾಗೂ ಡಿಸ್ಕೊ (ಓಂಕಾರ್) ಕೂಡ ಇದ್ದಾರೆ. ಇವೆಲ್ಲರ ಜೊತೆ ಇನ್ನೂ ಕೆಲ ಪಾತ್ರಗಳಿವೆ. ಇವರೆಲ್ಲರೂ ಒಂದೇ ಊರಿನಲ್ಲಿರುತ್ತಾರೆ. ಒಂದೇ ರಾತ್ರಿಯಲ್ಲಿ ಇಷ್ಟು ಪಾತ್ರಗಳು ಸಂಧಿಸುತ್ತವೆ. ಅದು ಹೇಗೆ ಅನ್ನೋದೇ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ.