ಕಂಗುವಾ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸೂರ್ಯ ನಾಯಕನಾಗಿ ನಟಿಸಿದ್ದು, ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಕಂಗುವಾ' ಸಿನಿಮಾ ತೆರೆಕಂಡಿತು.
ಕಥೆ: ಬೌಂಟಿ ಹಂಟರ್ ಆಗಿ ಫ್ರಾನ್ಸಿಸ್ (ಸೂರ್ಯ) ಗೋವಾದಲ್ಲಿ ಜಾಲಿ ಲೈಫ್ ಎಂಜಾಯ್ ಮಾಡಿಕೊಂಡಿರುತ್ತಾರೆ. ಆತನಿಗೆ ಏಂಜಲೀನಾ(ದಿಶಾ ಪಟಾನಿ) ಜೊತೆ ಲವ್ ಬ್ರೇಕಪ್ ಆಗಿರುತ್ತದೆ. ಅತ್ತ ರಷ್ಯಾದ ಲ್ಯಾಬ್‌ನಿಂದ ಒಬ್ಬ ಬಾಲಕ ತಪ್ಪಿಸಿಕೊಂಡು ಗೋವಾಗೆ ಬರುತ್ತಾನೆ. ಫ್ರಾನ್ಸಿಸ್ ಹಾಗೂ ಆ ಬಾಲಕನ ಭೇಟಿ ಆಗುತ್ತದೆ. ತಮ್ಮಿಬ್ಬರಿಗೂ ಏನೋ ನಂಟಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಆದರೆ ಆ ಬಾಲಕನಿಗಾಗಿ ಒಂದು ಸೈನ್ಯವೇ ಬರುತ್ತದೆ. ಫ್ರಾನ್ಸಿಸ್ ಆ ಬಾಲಕನ ರಕ್ಷಣೆಗೆ ನಿಲ್ಲುತ್ತಾನೆ. ಈ ಹೋರಾಟದ ಸಮಯದಲ್ಲಿ ಕಂಗುವ ಕಥೆ 1000 ವರ್ಷ ಹಿಂದಕ್ಕೆ ಹೋಗುತ್ತದೆ. ಅದು ಕ್ರಿಶ 1070ರ ಕಾಲಘಟ್ಟ. ಆಗ ಪ್ರಣವಾದಿ ಕೋನದ ನಾಯಕ 'ಕಂಗುವ' ಪ್ರಣವ ಎಂಬ ಬಾಲಕನ ಜವಾಬ್ದಾರಿ ವಹಿಸಿಕೊಂಡಿರುತ್ತಾನೆ. ಅದು 5 ಬೇರೆ ಬೇರೆ ಬುಡಕಟ್ಟು ಜನರ ಗುಂಪುಗಳ ಪ್ರಪಂಚ. ಅಲ್ಲಿ ಕಾಪಾಲ ಕೋನದ ನಾಯಕ ಉಧಿರನ್(ಬಾಡಿ ಡಿಯೋಲ್) ಹಾಗೂ ಕಂಗುವ ವೈರತ್ವ ಇರುತ್ತದೆ. ಅಷ್ಟಕ್ಕೂ ಏನಿದು ಪಂಚ ಕೋನಗಳ ಕಾನ್ಸೆಪ್ಟ್? ಕಂಗುವ ಹಾಗೂ ಪ್ರಣವ ಜನ್ಮಜನ್ಮಾಂತರದ ಕಥೆ ಏನು? ಕ್ಲೈಮ್ಯಾಕ್ಸ್‌ನಲ್ಲಿ ಬರುವ ರುದ್ರಾಂಗ ನೇತ್ರ(ಕಾರ್ತಿ) ಮಾಡುವ ಶಪಥ ಏನು? ಎಂಬುದೇ ಸಿನಿಮಾ ಕಥೆ.