ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸುತ್ತಿರುವ ಕಾಂತಾರ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದುರ್ ನಿರ್ಮಿಸುತ್ತಿದ್ದಾರೆ. ಇದು ಹೊಂಬಾಳೆ ಪ್ರೊಡಕ್ಷನ್ಸ್ ನ 11ನೇ ಚಿತ್ರ. ಚಿತ್ರದಲ್ಲಿ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ:
ಕರಾವಳಿ ಪ್ರದೇಶವನ್ನು ಪರುಶುರಾಮನ ಸೃಷ್ಟಿ ಎಂದು ಹೇಳುತ್ತಾರೆ. ಕಾಡಿನ ಪಕ್ಕ ಒಂದು ಊರು. ಆ ಕಾಡನ್ನು ನಂಬಿ ಬದುಕುವ ಜನ. ಕಾಡಿನ ರಕ್ಷಣೆಗೆ ನಿಂತ ಅರಣ್ಯ ಇಲಾಖೆ ಅಧಿಕಾರಿ ಮುರಳಿಧರ ಪಾತ್ರದಲ್ಲಿ ಕಿಶೋರ್ ಅಬ್ಬರಿಸಿದ್ದಾರೆ. ಊರಿನ ಜನರ ಪರ ನಿಲ್ಲುವ ನಾಯಕ ಶಿವನಾಗಿ ರಿಷಬ್ ಶೆಟ್ಟಿ ಕಿಶೋರ್‌ಗೆ ಸವಾಲ್ ಹಾಕಿದ್ದಾರೆ. ಇವರಿಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟದ ಕಥೆಯೇ 'ಕಾಂತಾರ'. 1847ರಲ್ಲಿ ಆರಂಭವಾಗುವ ಕತೆ ಚಿತ್ರ ಆರಂಭವಾದ ಹದಿನೈದು ನಿಮಿಷಗಳೊಳಗೆ 90ರ ದಶಕಕ್ಕೆ ಬಂದು ತಲುಪಿಬಿಡುತ್ತದೆ. ಟ್ರೈಲರ್ ನೋಡಿ ಈ ಚಿತ್ರ ಭೂತಕೋಲದ ಸುತ್ತ ನಡೆಯುವ ಕತೆ ಎಂದುಕೊಂಡರೆ ನಿಮ್ಮ ಊಹೆ ಸರಿ, ಕೇವಲ ಭೂತಕೋಲದ ಸುತ್ತ ಮಾತ್ರ ನಡೆಯುತ್ತೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಈ ಚಿತ್ರದಲ್ಲಿ ಭೂತಕೋಲ ಪ್ರಮುಖ ಅಂಶವಾಗಿದ್ದರೂ ಕತೆಯಲ್ಲಿ ಹೆಚ್ಚಾಗಿ ತೋರಿಸಿರುವುದು ಕಾಡುಬೆಟ್ಟು ಊರಿನ ಕುರಿತು, ಆ ಊರನ್ನು ಅರಣ್ಯ ಇಲಾಖೆಯಿಂದ ಉಳಿಸಿಕೊಳ್ಳಲು ಅವರು ನಡೆಸುವ ಹೋರಾಟದ ಕುರಿತು.
ಬೆಳವಣಿಗೆ: ಕಾಂತಾರ ಸಿನಿಮಾ ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ನಂತರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಯಿತು. ಕಾಂತಾರ ಚಿತ್ರಕ್ಕೆ ಬೇರೆ ಭಾಷೆಯ ಸಿನಿರಸಿಕರು ಫಿದಾ ಆದರು. ಈ ಸಿನಿಮಾವನ್ನು ನೋಡಿದ ವಿವಿಧ ಚಿತ್ರರಂಗದ ಸ್ಟಾರ್ ನಟರು ಕೂಡ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದಾರೆ. ಕಾಂತಾರ ಸಿನಿಮಾದಿಂದ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.