ಸಪ್ತ ಸಾಗರದಾಚೆ ಎಲ್ಲೋ ಭಾಗ ಒಂದರ ಮುಂದುವರೆದ ಭಾಗ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ. ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕನಾಗಿ ಹಾಗೂ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಪರವಃ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ.
ಕಥೆ: 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ 2021 ರಿಂದ ಸಿನಿಮಾ ಆರಂಭ ಆಗುತ್ತೆ. ಸೈಡ್ ಎ ನಲ್ಲಿ ಹೇಗೆ ಎಂಡ್ ಮಾಡಲಾಗಿತ್ತೋ ಅಲ್ಲಿಂದಲೇ ಸಿನಿಮಾ ಓಪನ್ ಆಗುತ್ತೆ. ಹೀರೊ ಜೈಲಿನಿಂದ ಹೊರಗೆ ಬರುತ್ತಾನೆ. ಪ್ರಿಯಾ (ರುಕ್ಮಿಣಿ ವಸಂತ್) ಆಡಿದ ಮಾತುಗಳ ಆಡಿಯೋವನ್ನು ಕೇಳಿಸಿಕೊಳ್ಳುತ್ತಲೇ ಇರುತ್ತಾನೆ. ಒಮ್ಮೆ ಪ್ರಿಯಾಳನ್ನು ಮತ್ತೆ ನೋಡಬೇಕು ಅಂತ ಅನಿಸುತ್ತೆ. ಪ್ರಿಯಾಗೆ ಅದಾಗಲೇ ಮದುವೆ ಆಗಿ, ಮಗು ಇರುತ್ತೆ. ಆದರೆ, ಕೋವಿಡ್‌ನಿಂದ ಅವರ ಜೀವನ ಕೆಳ ಮಧ್ಯಮ ವರ್ಗಕ್ಕೆ ಬಂದು ನಿಂತಿರುತ್ತೆ. ಬಳಿಕ ಆಕೆಯ ಬದುಕನ್ನು ಅವನು ಹೇಗೆ ಬದಲಾಯಿಸುತ್ತಾನೆ? ಮುಂದೆ ಮನು (ರಕ್ಷಿತ್ ಶೆಟ್ಟಿ) ಕಥೆ ಏನಾಗುತ್ತೆ ಅನ್ನೋದೇ ಸಿನಿಮಾ.
ಬಿಡುಗಡೆ: ಸಪ್ತ ಸಾಗರದಾಚೆ ಎಲ್ಲೋ ಭಾಗ 1, 2023ರ ಸೆಪ್ಟಂಬರ್ 1ರಂದು ಬಿಡುಗಡೆಯಾಗಿತ್ತು. ಭಾಗ 2 ನವೆಂಬರ್ 17ರಂದು ಬಿಡುಗಡೆ ಆಯಿತು.