ಸಂತೋಷ್ ಜಿ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ಸಿನಿಮಾ ಶುಭಮಂಗಳ. ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್ ಗೋಪಾಲ್, ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ. ಚಿತ್ರದಲ್ಲಿ ಮೇಘನಾ ಗಾವಂಕರ್, ಹಿತಾ ಚಂದ್ರಶೇಖರ್ ಮತ್ತು ಸಿದ್ಧಾರ್ಥ್ ಮಾಧ್ಯಮಿಕ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ಬಿ. ರಾಜ್ ಕ್ಯಾಮರಾ, ಸಂತೋಷ್ ನಿರ್ದೇಶನದ ಜೊತೆಗೆ ಸಂಕಲನ ಇದೆ. ಅವ್ಯಕ್ತ ಫಿಲ್ಮಂಸ್ನಡಿ ಸಂತೋಷ್ ಸ್ನೇಹಿತರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡವು ಮದುವೆ ಮನೆಗಳಿಗೆ ತೆರಳಿ ವಿಭಿನ್ನವಾಗಿ ಪ್ರಮೋಷನ್ ನಡೆಸುತ್ತಿದ್ದು, ಅಕ್ಟೋಬರ್ 14ರಂದು ಚಿತ್ರ ತೆರೆ ಕಾಣಲಿದೆ.