ಕನ್ನಡ ಸಿನಿಮಾರಂಗದಲ್ಲಿ ಆರ್ಮುಗಂ ಎಂದೇ ಪ್ರಖ್ಯಾತಿ ಪಡೆದ ರವಿಶಂಕರ್ ಪುತ್ರ ಅಧ್ವಯ್ ಶಂಕರ್ ನಟನೆಯ ಚೊಚ್ಚಲ ಸಿನಿಮಾ ಸುಬ್ರಮಣ್ಯ. ಮಗನ ಚೊಚ್ಚಲ ಸಿನಿಮಾವನ್ನು ರವಿಶಂಕರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
ರವಿಶಂಕರ್ ಕಳೆದ 20 ವರ್ಷಗಳ ಹಿಂದೆ ನಟಿ ಮಾಲಾಶ್ರೀ ಅಭಿನಯದ ದುರ್ಗಿ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ಇದಾದ ನಂತರ ಅವರು ನಿರ್ದೇಶನದತ್ತ ಮುಖ ಮಾಡಿರಲಿಲ್ಲ. ಈಗ 20 ವರ್ಷಗಳ ನಂತರ ತಮ್ಮ ಮಗನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಸುಬ್ರಹ್ಮಣ್ಯ ಸಿನಿಮಾಗೆ ಕೆಜಿಎಫ್, ಸಲಾರ್ ಖ್ಯಾತಿಯ ಸಂಗೀತ ಮಾಂತ್ರಿಕ ರವಿ ಬಸ್ರೂರ್ ಮ್ಯೂಸಿಕ್, ವಿಜಯ್ ಎಂ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆಯಿದೆ. ಜೊತೆಗೆ ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ರಾಜ್ ತೋಟ ಛಾಯಾಗ್ರಹಣವಿದೆ. ಈ ಸಿನಿಮಾವನ್ನು ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ಅಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ನಿರ್ಮಿಸುತ್ತಿದ್ದಾರೆ.. ಡಿಸೆಂಬರ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ.