»   » ಡಾ. ವಿಷ್ಣುವರ್ಧನ್‌ಗೆ ಮೈಸೂರಿನಲ್ಲಿ ಶಸ್ತ್ರಚಿಕಿತ್ಸೆ

ಡಾ. ವಿಷ್ಣುವರ್ಧನ್‌ಗೆ ಮೈಸೂರಿನಲ್ಲಿ ಶಸ್ತ್ರಚಿಕಿತ್ಸೆ

Subscribe to Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ಮೈಸೂರಿನ ಕಿಂಗ್‌ ಕೋರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವಿಷ್ಣು ಬದುಕಿನಲ್ಲಿನ ಅನಾರೋಗ್ಯ ಪರ್ವ ಸದ್ದಿಲ್ಲದೇ, ಸುಖಾಂತವಾಗಿದೆ.

ಅವರ ದೇಹದ ಎಡ ಭಾಗದಲ್ಲಿ ಸಂಗ್ರಹವಾಗಿದ್ದ ನೀರನ್ನು ಮೈಸೂರಿನ ವಿಕ್ರಮ್‌ ಆಸ್ಪತ್ರೆಯ ವೈದ್ಯರ ತಂಡ, ಕಳೆದ ಶನಿವಾರ(ಜು.1)ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದೆ. ಹೀಗಾಗಿ ಅವರಿಗೆ ಯಾವುದೇ ತೊಂದರೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವಿಷ್ಣು ತಂಗಿರುವ ಕಿಂಗ್‌ ಕೋರ್ಟ್‌ ಹೋಟೆಲ್‌ ಕೊಠಡಿ, ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ತಮ್ಮ ಪತ್ನಿ ಭಾರತಿ ಮತ್ತು ಬಂಧುಮಿತ್ರರ ಆರೈಕೆಯಲ್ಲಿ ವಿಷ್ಣು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮುಂದಿನ ಹದಿನೈದು ದಿನ ಅವರು ಹಾಸಿಗೆ ಬಿಡುವಂತಿಲ್ಲ.

ಅನಾರೋಗ್ಯದ ವಿವರ : ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ, ಎಸ್‌.ನಾರಾಯಣ್‌ ನಿರ್ದೇಶನದ ‘ಸಿರಿವಂತ’ ಚಿತ್ರದ ಚಿತ್ರೀಕರಣದಲ್ಲಿ ಅವರು ಕಳೆದ ವಾರ ಪಾಲ್ಗೊಂಡಿದ್ದರು. ಏಕಾಏಕಿ ಅವರನ್ನು ಕಾಡಿದ ಅನಾರೋಗ್ಯದಿಂದಾಗಿ ಚಿತ್ರೀಕರಣವನ್ನು ವಿಷ್ಣು ರದ್ದುಪಡಿಸಿದರು. ನಂತರ ಮೈಸೂರಿನ ವಿಕ್ರಮ್‌ ಆಸ್ಪತ್ರೆ(ಈ ಆಸ್ಪತ್ರೆಯ ಟ್ರಸ್ಟಿಗಳಲ್ಲಿ ವಿಷ್ಣು ಸಹಾ ಒಬ್ಬರು)ಗೆ ಅವರು ಕೂಡಲೇ ದಾಖಲಾದರು.

ವಿವಿಧ ವೈದ್ಯಕೀಯ ಪರೀಕ್ಷೆಗಳ ಮೂಲಕ ದೇಹದೊಳಗಿನ ನೀರನ್ನು ವೈದ್ಯರು ಪತ್ತೆ ಹಚ್ಚಿದರು. ಈ ತೊಂದರೆಯಿಂದಾಗಿ ವಿಷ್ಣು ತೂಕ 75ರಿಂದ 85 ಕೆ.ಜಿಗೆ ಹೆಚ್ಚಳವಾಗಿದ್ದ ಅಂಶ ಬೆಳಕಿಗೆ ಬಂತು. ಶಸ್ತ್ರಚಿಕಿತ್ಸೆ ಮೂಲಕ ವಿಷ್ಣು ಅವರ ಸಮಸ್ಯೆಯನ್ನು ವೈದ್ಯರ ತಂಡ ನೀಗಿಸಿದೆ.

ಎಲ್ಲವೂ ಸುಖಾಂತವಾಗಿ ಮುಗಿದಿದೆ. ವಿಷ್ಣು ಆರೋಗ್ಯ ಬೇಗ ಸುಧಾರಿಸಲಿ... ಸಾಹಸಸಿಂಹ ಮತ್ತೆ ಬೆಳ್ಳಿತೆರೆ ಮೇಲೆ ಘರ್ಷಿಸಲಿ ಎಂದು ದಟ್ಸ್‌ ಕನ್ನಡ ಹಾರೈಸುತ್ತಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada