»   » ಗೋವಿನ ಮಹತ್ವ ಸಾರುವ ಶಂಕರ ಪುಣ್ಯಕೋಟಿ

ಗೋವಿನ ಮಹತ್ವ ಸಾರುವ ಶಂಕರ ಪುಣ್ಯಕೋಟಿ

Subscribe to Filmibeat Kannada
sharat babu
ಹುಣ್ಣಿಮೆ ಬೆಳದಿಂಗಳಲ್ಲಿ ಜೇನುತುಪ್ಪಸವಿದಂಥಾ ಅನುಭವ ಕೊಡುವ ಸಿನಿಮಾ ಇದು. ಎಲ್ಲರೂ ನೋಡಬೇಕು. ನೋಡಿ ಮರುಳಾಗಬೇಕು. ಇಂಥ ಸಿನಿಮಾಗಳು ಹೃದಯದಿಂದ ಆಗುವಂಥವು. ತಲೆಯಿಂದ ಅಲ್ಲ... ನಟ ಶರತ್‌ಬಾಬು ಪ್ರತಿ ಮಾತೂ ಭಾವುಕತೆಯಲ್ಲಿ ಅದ್ದಿದಂತಿತ್ತು.

'ಶಂಕರ ಪುಣ್ಯಕೋಟಿ' ಚಿತ್ರದ ನಾಯಕ ಶರತ್‌ಬಾಬು. ಚಿತ್ರೀಕರಣ ನಡೆದ ಇಪ್ಪತ್ತೈದೂ ದಿನ ಅವರು ಉಟ್ಟಿದ್ದು ಪಂಚೆ. ತೊಟ್ಟಿದ್ದು ಶಲ್ಯ. ತಲೆತುಂಬಾ ಆ ಪಾತ್ರದ್ದೇ ಯೋಚನೆ. ಕೊಟ್ಟಿಗೆಯಲ್ಲಿ ಕೂರಬೇಕು, ಗೋಮೂತ್ರದ ವಾಸನೆ ಸಹಿಸಿಕೊಳ್ಳಬೇಕು, ದೇವಸ್ಥಾನದ ವಾತಾವರಣಕ್ಕೆ ಸಂಪೂರ್ಣ ಒಗ್ಗಿಕೊಳ್ಳಬೇಕು... ಮೊದಲಾದ ಬೇಕುಗಳನ್ನು ಶರತ್ ತಮ್ಮದಾಗಿಸಿಕೊಂಡಿದ್ದಾರೆ. ಶೂಟಿಂಗ್‌ಗೆ ಮೊದಲು, ಶೂಟಿಂಗ್ ಮುಗಿದ ನಂತರ ತಾವು ನಿರ್ವಹಿಸಿದ್ದ ಪಾತ್ರವನ್ನೇ ಧ್ಯಾನಿಸುತ್ತಾ ಅವರು ನಟಿಸಿದ್ದಾರಂತೆ.

ನನ್ನ ಬದುಕಿಗೆ ತುಂಬಾ ಹತ್ತಿರವಾದ ಪಾತ್ರವಿದು. ನಾನು ಮೃದುಭಾಷಿ. ಈ ಪಾತ್ರ ನಿರ್ವಹಿಸಿದ ಮೇಲೆ ಇನ್ನೂ ಮೃದುವಾಗಿದ್ದೇನೆ. ಇಂಥಾ ಪಾತ್ರಗಳನ್ನು ಹೆಚ್ಚು ಒಪ್ಪಿಕೊಂಡಷ್ಟೂ ನಾವು ವೈಯಕ್ತಿಕವಾಗಿಯೂ ಬೆಳೆಯುತ್ತೇವೆ ಎಂದು ಅವರು ಕನ್ನಡಕದೊಳಗಿನ ಕಣ್ಣುಗಳನ್ನು ಇನ್ನೂ ಸಣ್ಣಗೆ ಮಾಡಿಕೊಂಡರು.

ಒಂದೇ ಹಂತದಲ್ಲಿ ಚಿತ್ರೀಕರಣಕ್ಕೆ ಒಪ್ಪಿಕೊಳ್ಳುವಷ್ಟು ಪುರುಸೊತ್ತಿರುವ ನಟ ಶರತ್‌ಬಾಬು ಅಲ್ಲ. ಆದರೆ, ಈ ಚಿತ್ರದ ಮೇಲಿನ ವಿಶೇಷ ಪ್ರೀತಿ ಅವರನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಕನ್ನಡದಲ್ಲಿ ತಾವೇ ಒಂದು ಸಿನಿಮಾ ಮಾಡಬೇಕು ಎಂಬ ಬಯಕೆಯನ್ನು ಕೂಡ ಅವರು ನೇವರಿಸುತ್ತಲೇ ಇದ್ದಾರೆ. ನಿರ್ದೇಶಕ ಜಿ.ಮೂರ್ತಿ ಅವರ ಸಿನಿಮಾ ಪ್ರೀತಿಯನ್ನು ಕೊಂಡಾಡಲು ಶರತ್‌ಬಾಬು ಅವರಲ್ಲಿ ಸಾಕಷ್ಟು ಮಾತುಗಳಿದ್ದವು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada