»   » ಬಣ್ಣದ ಲೋಕದ ಮಂದಿಯನ್ನು ನಿವಾಳಿಸಿ ಎಸೆದ ಮತದಾರ

ಬಣ್ಣದ ಲೋಕದ ಮಂದಿಯನ್ನು ನಿವಾಳಿಸಿ ಎಸೆದ ಮತದಾರ

Subscribe to Filmibeat Kannada

ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಣ್ಣದ ಲೋಕದ ಥಳಕುಬಳುಕಿಗೆ ಮರುಳಾಗಿಲ್ಲ. ವರ್ಚಸ್ಸು, ಚರಿಷ್ಮಾ, ಸ್ಟಾರ್‌ಗಿರಿ, ನಾಟಕದ ಮಾತು, ತೋರಿಕೆಯ ಭರವಸೆಗಳನ್ನೆಲ್ಲ ಬದಿಗಿಟ್ಟು ಕಣಕ್ಕಿಳಿದಿದ್ದ ಸಿನೆಮಾ ತಾರೆಗಳನ್ನೆಲ್ಲ ನಿವಾಳಿಸಿ ಎಸೆದಿದ್ದಾರೆ, ಸೋಲಿನ ಮಳೆ ಸುರಿಸಿದ್ದಾರೆ.

ಪ್ರಥಮ ಬಾರಿಗೆ ತೇರದಾಳದಿಂದ ಉಮಾಶ್ರೀ, ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದ ಅಂಬರೀಷ್ ಶ್ರೀರಂಗಪಟ್ಟಣದಿಂದ, ಬಂಡಾಯದ ಬಸಿ ಎಬ್ಬಿಸಿ ಟಿಕೀಟು ಗಿಟ್ಟಿಸಿಕೊಂಡಿದ್ದ ಜಗ್ಗೇಶ್ ತುರುವೇಕೆರೆಯಿಂದ, ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದ 'ಕೌರವ' ಬಿಸಿ ಪಾಟೀಲ್, ಅತ್ತ ಪೂರ್ಣ ಪ್ರಮಾಣದ ನಟನೂ ಆಗದ ರಾಜಕಾರಣಿಯೂ ಆಗದ ಸಿಪಿ ಯೋಗೇಶ್ವರ್ ಚನ್ನಪಟ್ಟಣದಿಂದ, ರಾಜಕಾರಣಿಯಾದಾಗಿನಿಂದ ಕ್ಷೇತ್ರದತ್ತ ತಲೆಯನ್ನೇ ಹಾಕದ ಶಶಿಕುಮಾರ್ ಚಳ್ಳಕೆರೆಯಿಂದ, ಸಿನೆಮಾರಂಗದಲ್ಲಿ ಕೆಲಸವಿಲ್ಲದೆ ರಿಟೈರಾಗಿದ್ದ ನಿರ್ದೇಶಕ ಮಹೇಂದರ್, ಮುಂಗಾರು ಮಳೆಯಿಂದ ಚಿತ್ರರಂಗಕ್ಕೆ ಗೆಲುವಿನ ಮಳೆ ಸುರಿಸಿದ್ದ ಇ. ಕೃಷ್ಣಪ್ಪ ಯಲಹಂಕದಿಂದ, ನಿರ್ಮಾಪಕ ಸಂದೇಶ ನಾಗರಾಜ್ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾಶ್ರೀ ಎಂಬ ನಟಿಯೊಬ್ಬರು ಈ ಬಾರಿ ವಿಧಾನಸೌಧ ಹತ್ತುವ ಉಮ್ಮೇದಿಯಿಂದ ಮತದಾರರತ್ತ ಕೈಯೊಡ್ಡಿದ್ದರು.

ಇವರಲ್ಲಿ ತುರುವೇಕೆರೆಯಿಂದ ಜಗ್ಗೇಶ್ ಮತ್ತು ಹಿರೇಕೇರೂರಿನಿಂದ ಸ್ಪರ್ಧಿಸಿದ್ದ ಬಿಸಿ ಪಾಟೀಲ್ ಅವರಿಬ್ಬರನ್ನು ಬಿಟ್ಟು ಉಳಿದೆಲ್ಲರಿಗೂ ಜಾಣ ಮತದಾರರು ಕೈ ತೋರಿಸಿದ್ದಾರೆ. ರಂಗುರಂಗಿನ ಮಾತುಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ, ಚಿತ್ರರಂಗದ ಯಶಸ್ಸು ರಾಜಕೀಯ ದ್ವಾರ ಬಡಿಯಲು ಮಾನದಂಡವಲ್ಲವೆಂದು ಕ್ಷೇತ್ರಕ್ಕೇ ಬಾರದ ಶಾಸಕರಿಗೆ, ಮಾಜಿ ಸಂಸದರಿಗೆ, ಮಾಜಿ ನಟನಟಿಯರಿಗೆ ಮತದಾರರು ಬರೋಬ್ಬರಿ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ಟಿಕೆಟ್ ಸಿಗದೇ ಕಂಗಾಲಾಗಿ ಬಂಡಾಯದ ಬಾವುಟ ಹಾರಿಸಿದ್ದ ಜಗ್ಗೇಶ್ ಮಾತ್ರ ನಿರೀಕ್ಷಿತವೋ ಅನಿರೀಕ್ಷಿತವೋ ಅಂತೂ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಅಷ್ಟೋ ಇಷ್ಟೋ ಕೆಲಸ ಮಾಡಿದ್ದು ಅವರ ಸಹಾಯಕ್ಕೆ ಬಂದಿದೆ. ಚಿತ್ರರಂಗದಲ್ಲಿ ಕೆಲಸ ಕಡಿಮೆಯಿದ್ದಾಗ ಜನರ ಹಿತಕ್ಕಾಗಿಯೂ ಕೆಲಸ ಮಾಡಿದ್ದಕ್ಕೆ ಮತದಾರರು ಅವರ ಕೈಬಿಟ್ಟಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ರಚಿಸುವ ಯಾವ ಸಾಧ್ಯತೆಯೂ ಇಲ್ಲದ್ದರಿಂದ ಜನಸೇವೆಯನ್ನು ಸದ್ಯಕ್ಕೆ ಬದಿಗಿಟ್ಟು ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುತ್ತಾರೋ ನೋಡಬೇಕು. ಬಿಸಿ ಪಾಟೀಲ್ ಗೆಲ್ಲಿಸಿದ್ದಕ್ಕಾಗಿ ಮತದಾರರಿಗೆ ವಿಶೇಷ 'ಥ್ಯಾಂಕ್ಸ್' ಹೇಳಬೇಕು. ಚನ್ನಪಟ್ಟಣ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಸೈನಿಕ ಖ್ಯಾತಿಯ ಸಿ.ಪಿ. ಯೋಗೀಶ್ವರ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ಆದರೆ ಇದೇ ಮಾತನ್ನು ಉಳಿದವರಿಗೆ ಹೇಳಲಾಗುವುದಿಲ್ಲ. ಸಂಸದರಾಗಿದ್ದಾಗ ಅಂಬರೀಷ್ ಕ್ಷೇತ್ರದ ಉದ್ಧಾರಕ್ಕಾಗಿ ಕೆಲಸ ಮಾಡಿದ್ದೂ ಅಷ್ಟಕ್ಕಷ್ಟೇ. ಮೊದಲ ಪಟ್ಟಿಯಲ್ಲಿ ಟಿಕೀಟು ಸಿಗದಿದ್ದರೂ ತಾರಾವರ್ಚಸ್ಸಿನಿಂದ ಟಿಕೀಟು ಗಿಟ್ಟಿಸಿದ್ದ ಅಂಬಿ ಈಗ ಶ್ರೀರಂಗಪಟ್ಟಣದಿಂದ ಕಂಬಿ ಕೀಳುವಂತೆ ಮಾಡಿದ್ದಾರೆ ಜನತೆ. ತಮಿಳುನಾಡು ಹೊಗೇನಕಲ್ ಯೋಜನೆಗೆ ಸಂಬಂಧಿಸಿದಂತೆ ಕ್ಯಾತೆ ತೆಗೆದಿದ್ದಾಗ ಜನರ ಕಷ್ಟಕ್ಕೆ ಧಾವಿಸದಿದ್ದುದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಅವರು ಇನ್ನೆಂದು ಮೇಲೇಳಲಿಕ್ಕಿಲ್ಲ.

ಚಿತ್ರದಲ್ಲಿ ಮಾತಿನ ಮೋಡಿಯಿಂದ ಚಿತ್ರರಸಿಕರ ಮನಗೆದ್ದಿದ್ದ ಉಮಾಶ್ರೀ ಉತ್ತರ ಕರ್ನಾಟಕದ ಜನತೆಯ ಮತವನ್ನು ಗೆಲ್ಲಲು ಸೋತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ನಾಟಕಗಳನ್ನು ಪ್ರದರ್ಶಿಸಿ, ಅಲ್ಲಿನ ಭಾಷೆಯನ್ನು ಕರಗತ ಮಾಡಿಕೊಂಡಿದ್ದರೂ ಇದ್ಯಾವುದೂ ಅಲ್ಲಿ ಕೆಲಸಕ್ಕೆ ಬಂದಿಲ್ಲ. ಉಮಾಶ್ರೀಯಾಗಲಿ ಹೇಮಾಶ್ರೀಯಾಗಲಿ ಜಯಶ್ರೀ ಮುಡಿಗೇರಲು ಅನುಭವ, ವರ್ಚಸ್ಸು ಬೇಕೆಂದು ಮತದಾರ ಮನದಟ್ಟು ಮಾಡಿಕೊಟ್ಟಿದ್ದಾನೆ.

ಬಾಗೇಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡೈಲಾಗ್ ಕಿಂಗ್ ಸಾಯಿಕುಮಾರ್ ಮಾತಾಡದಂತೆ ಮತದಾರರು ಮಾಡಿದ್ದಾರೆ. ಸಿನಿಮಾ ನಂಟು ಹೊಂದಿರುವ ಬಂಗಾರಪ್ಪನವರ ಪುತ್ರರಾದ ಕುಮಾರ್ ಹಾಗೂ ಮಧು ನೆಲಕಚ್ಚಿದ್ದಾರೆ. ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೇಮಾಶ್ರೀ, ಸಂದೇಶ್ ನಾಗರಾಜ್, ಮಹೇಂದರ್ ಇವರಿಗೆ ಸ್ವಂತಃ ಗೆಲ್ಲುವ ಭರವಸೆಯಿರಲಿಲ್ಲ. ಮುಂಗಾರು ಮಳೆಯ ಯಶಸ್ಸನ್ನು ಕ್ಯಾಷ್ ಮಾಡೋಣವೆಂದು ಕಣಕ್ಕಿಳಿದಿದ್ದ ಇ.ಕೃಷ್ಣಪ್ಪಗೆ ಮಾತ್ರ ಸೋಲು ಅನಿರೀಕ್ಷಿತ.

(ದಟ್ಸ್ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada