Celebs»Ananth Nag»Biography

  ಅನಂತ್ ನಾಗ್ ಜೀವನಚರಿತ್ರೆ

  ಪರಿಚಯ

  ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ,ತಮಿಳು,ತೆಲುಗು,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ಇವರು 1994ರ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಂತಕಥೆ ದಿ. ಶಂಕರನಾಗ್ ಇವರ ನಲ್ಮೆಯ ಕಿರಿಯ ಸಹೋದರ. ಇವರ ಪತ್ನಿ ಗಾಯತ್ರಿ ಕೂಡಾ ಕನ್ನಡ ಚಿತ್ರರಂಗದ ಹಿರಿಯನಟಿ.

  ವೈಯಕ್ತಿಕ ಜೀವನ

  1948 ಸೆಪ್ಟಂಬರ್ 4 ರಂದು ಮುಂಬೈನಲ್ಲಿ ಜನಿಸಿದ ಅನಂತನಾಗ್ ನಾಗರಕಟ್ಟೆ ತಮ್ಮ ಜೀವನದ ಮೊದಲ ಆರು ವರ್ಷದ ಜೀವನವನ್ನು ಕಾಸರಗೋಡಿನ ಹತ್ತಿರದ ಆನಂದಾಶ್ರಮದಲ್ಲಿ ಕಳೆದರು. ನಂತರ ಹೊನ್ನಾವರದಲ್ಲಿ 5ನೇ,6ನೇ,7ನೇ ಮತ್ತು 8ನೇ ತರಗತಿಯಲ್ಲಿ ಅಭ್ಯಾಸ ಮಾಡಿದ ಇವರು ಮುಂದಿನ ವಿಧ್ಯಾಭ್ಯಾಸ ಮಾಡಿಲು ಮುಂಬೈನ ಸೇಂಟ್ ಕ್ಸೇವೀಯರ್ ಶಾಲೆಗೆ ಹೋದರು.

   ನಾಟಕ ಜೀವನ

  ಮುಂಬೈಯಲ್ಲಿ ವಿಧ್ಯಾಭ್ಯಾಸವನ್ನು ಮಾಡುವಾಗ ಬಾಂಬೆಯ ನಾಟಕ ಲೋಕದ ಸಂಪರ್ಕಕ್ಕೆ ಬಂದ ಇವರು ಧರಿಸಿದ ಮೊದಲ ನಾಟಕವೇಷ ಚೈತನ್ಯ ಮಹಾಪ್ರಭುಗಳುದು.ಈ ಮೂರಂಕಿಯ ನಾಟಕ ತುಂಬಾ ಪ್ರಸಿದ್ಢವಾಯಿತು. ಮುಂದೆ ಇವರು ಧರಿಸಿದ ವೇಷ ಗೌತಮ ಬುದ್ಧ. ಅಮೋಲ್ ಪಾಲೇಕರ್ ಮತ್ತು ಸತ್ಯದೇವ ದುಬೆಯವರ ಜೊತೆ ಸೇರಿ ಹಿಂದಿ ಮತ್ತು ಮರಾಠಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ನಾಟಕಗಳನ್ನು ಮಾಡಿದರು. 1967 ರಿಂದ 1972 ರವರೆಗೆ ಕನ್ನಡ,ಕೊಂಕಣಿ,ಮರಾಠಿ,ಹಿಂದಿ ಭಾಷೆಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಮಾಡಿದರು. ನಂತರ ತಮ್ಮ ಗೆಳೆಯರಾದ ಅನಂತ್, ಆನಂದ್ ಎಂಬುವರ ಜೊತೆ ಸೇರಿ `3A' ಎಂಬ ತಂಡ ಮಾಡಿ ತಾವೇ ಸ್ವತಃ ನಾಟಕ ನಿರ್ದೇಶನ,ನಿರ್ಮಾಣಕ್ಕಿಳಿದರು.

  ಮುಂದೆ ಬೆಂಗಳೂರಿಗೆ ಬಂದನಂತರವೂ ತಮ್ಮ ಶಂಕರನ ಜೊತೆ ನಾಟಕರಂಗದಲ್ಲಿ ತೊಡಗಿಸಿಕೊಂಡಿದ್ದರು.

  ಚಿತ್ರಜೀವನ

  1972 ರಲ್ಲಿ ಕನ್ನಡ ಚಿತ್ರ `ಸಂಕಲ್ಪ' ಮತ್ತು ಶ್ಯಾಮ ಬೆನಗಲ್ ರ `ಅಂಕುರ್' ಚಿತ್ರದಿಂದ ಸಿನಿಪಯಣ ಶುರು ಮಾಡಿದರು. ಅನಂತನಾಗ್ ನಟಿಸಿದ 7 ಹಿಂದಿ ಚಿತ್ರಗಳಲ್ಲಿ 6 ಚಿತ್ರಗಳನ್ನು ಶ್ಯಾಮ್ ಬೆನಗಲ್ ಅವರ ನಿರ್ದೆಶನದಲ್ಲಿ ನಟಿಸಿರುವುದು ವಿಶೇಷ. ಮುಂದೆ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ಮೂಡಿಬಂದ `ಹಂಸಗೀತೆ' ಚಿತ್ರದಲ್ಲಿ ಸಂಗೀತಗಾರ ವೆಂಕಟಸುಬ್ಬಯ್ಯನವರ ಪಾತ್ರದಲ್ಲಿ ಮಿಂಚಿದರು.

  1975 ರಲ್ಲಿ ತೆರೆಕಂಡ ದೊರೈ ಭಗವಾನ್ ನಿರ್ದೇಶನದ `ಬಯಲುದಾರಿ' ಚಿತ್ರದಲ್ಲಿ ಕಲ್ಪನಾ ಜೊತೆ ನಟಿಸಿ ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರಾದರು.

  ನಟಿ ಲಕ್ಷಿಯವರ ಜೊತೆ `ಚಂದನದ ಗೊಂಬೆ' ಚಿತ್ರದ ಮೂಲಕ ಒಂದುಗೂಡಿದ ಅನಂತ್ ಸುಮಾರು 25 ಚಿತ್ರಗಳಲ್ಲಿ ನಟಿಸಿದರು.

  ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕನಟ ಹಾಸ್ಯಪ್ರಧಾನ ಚಿತ್ರಗಳಲ್ಲಿ ನಟಿಸುವ ಪ್ರವೃತ್ತಿಗೆ ಮುನ್ನುಡಿ ಬರೆದ ಕೀರ್ತಿ ಅನಂತನಾಗ್ ಅವರದು. ಸಾಲು ಸಾಲಾಗಿ ಬಂದ ಗಣೇಶನ ಸರಣಿ ಚಿತ್ರಗಳೇ ಇವಕ್ಕೆ ಸಾಕ್ಷಿ.

  ಇವರು 1995 ರಲ್ಲಿ ನಟಿಸಿದ ಟೆಲಿಫೋನ್ ಸಂಭಾಷಣೆ ಆಧಾರಿತ ಚಿತ್ರ `ಬೆಳದಿಂಗಳ ಬಾಲೆ' ಕನ್ನಡ ಚಿತ್ರರಂಗಕ್ಕೆ ಹೊಸದಿಕ್ಕನ್ನೇ ಕೊಟ್ಟಿತ್ತು.

  ಹೀಗೆ ಶುರುವಾದ ಅನಂತನಾಗರ ಚಿತ್ರಜೀವನ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳನ್ನು ದಾಟಿ ಮುನ್ನುಗ್ಗುತ್ತಿದೆ.

  ರಾಜಕೀಯ ಜೀವನ

  ಮೊದಲಿಂದನಿಂದಲೂ ಸಾಮಾಜಿಕ ಕಳಿಕಳಿ ಹೊಂದಿರುವ ಅನಂತ ನಾಗ್ 1983 ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಕೊಂಡಿದ್ದರು.1983,1985,1989 ರ ಚುನಾವಣೆಗಳಲ್ಲಿ ಜನತಾದಳದ ಸ್ಟಾರ್ ಪ್ರಚಾರಕರಾಗಿದ್ದರು. 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು ಜೆ.ಎಚ್.ಪಟೇಲ್ ರ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಸಚಿವರಾಗಿದ್ದರು.1983 ರ ಲೋಕಸಭೆ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಿದ್ದರು.

  ತಮ್ಮ ಶಂಕರನಾಗ್ ರ ಜೊತೆಗಿನ ಭಾಂಧವ್ಯ

  ಅನಂತನಾಗ್ ರ ಜೀವನದಲ್ಲಿ ಶಂಕರನಾಗ್ ಕೇವಲ ಕಿರಿಯ ಸಹೋದರನಾಗಿರದೇ ಒಬ್ಬ ಮಗನಾಗಿಯೇ ಇದ್ದರು. ಇಬ್ಬರು ಸಹೋದರರು ನಾಟಕರಂಗದಲ್ಲಿ ಮಾತ್ರವಲ್ಲದೇ ಚಿತ್ರರಂಗದಲ್ಲಿಯೂ ಕೂಡ ಜೊತೆಜೊತೆಗೆ ನೆಡೆದರು. ತದ್ವಿರುದ್ದ ವ್ಯಕ್ತಿತ್ವದವರಾದ ಈ ಇಬ್ಬರು ಸಹೋದರರ ಮಿಂಚಿನ ಓಟಕ್ಕೆ ವಿಧಿ ಬೇಗನೇ ತಡೆಯೊಡ್ಡಿತು. ಅನಂತನಾಗ್ ಜೀವನದ ಅತಿ ದೊಡ್ಡ ಆಘಾತ ಶಂಕರನನ್ನು ಕಳೆದುಕೊಂಡಿದ್ದು. ಪ್ರೀತಿಯ ತಮ್ಮನ ನೆನಪಲ್ಲಿ `ನನ್ನ ತಮ್ಮ ಶಂಕರ' ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಬಂದಿದೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X