ಆಶಾಲತ
ಆಶಾಲತ ಜೀವನಚರಿತ್ರೆ
ಆಶಾಲತಾ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು 20 ಕ್ಕೂ ಹೆಚ್ಚು ಕಿರುತೆರೆ ಧಾರಾವಾಹಿಗಳಲ್ಲಿ ವಿಭಿನ್ನ ಮತ್ತು ವಿಶಿಷ್ಟ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಕಲಾಜೀವನಕ್ಕೆ ಪ್ರವೇಶ
ಇವರ ತಾಯಿ ಬಿ.ರಾಜಮ್ಮ ಕೂಡ ಚಿತ್ರನಟಿ ಮತ್ತು ಖ್ಯಾತ ಹಿರಿಯ ಕಲಾವಿದೆ `ಎಂ.ವಿ.ರಾಜಮ್ಮ' ನವರ ಸ್ನೇಹಿತೆ. ಆಶಾಲತಾರವರು 10 ವರ್ಷದವರಿದ್ದಾಗ ತಮ್ಮ ತಾಯಿಯ ಜೊತೆ ಬಿ.ಆರ್.ಪಂತಲುರವರ `ಕೃಷ್ಣದೇವರಾಯ' ಚಿತ್ರದ ಶೂಟಿಂಗ್ ನೋಡಲು ಮದ್ರಾಸ್ ಗೆ ಹೋಗಿರುತ್ತಾರೆ . ಅಲ್ಲಿ ಒಂದು ಬಾಲನಟಿಯ ಪಾತ್ರಕ್ಕೆ ಅವಶ್ಯಕತೆಯಿದ್ದಾಗ ಎಂ.ವಿ.ರಾಜಮ್ಮನವರು ಆಶಾಲತಾ ಅವರ ಹೆಸರನ್ನು ಶಿಫಾರಸು ಮಾಡುತ್ತಾರೆ. ಅಲ್ಲಿಂದ ಇವರ ಕಲಾಜೀವನ ಆರಂಭವಾಯಿತು.ನಂತರ 1977 ರಲ್ಲಿ `ಒಂದು ಪ್ರೇಮದ ಕಥೆ' ಚಿತ್ರದಿಂದ ಪೂರ್ಣ ಪ್ರಮಾಣದ ಅಭಿನಯ ಜೀವನಕ್ಕೆ ಅಡಿಯಿಡುತ್ತಾರೆ. ನಂತರ `ಬಂಡ ನನ್ನ ಗಂಡ',`ತುಂಬಿದ ಮನೆ' ,`ನಾಗ ಕಾಳ ಭೈರವ' ಮುಂತಾದ ಚಿತ್ರಗಳಲ್ಲಿ ಅಭಿನಯಿಸುತ್ತಾರೆ.
ಕಿರುತೆರೆ ಪಯಣ
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿನ ನಟನೆಯಿಂದ ಹಿಡಿದು ಟಿ.ಎಸ್.ನಾಗಾಭರಣ, ಬಾಲಾಜಿ ಟೆಲಿಫಿಲಂಸ್ ಮುಂತಾದವರ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. `ಜೋಕಾಲಿ' ಧಾರಾವಾಹಿಯ ಅರ್ಚನಮ್ಮನಾಗಿ ಜನಮಾನಸಕ್ಕೆ ಹತ್ತಿರವಾದರು. `ಚಾರುಲತಾ',`ನಾಗಿನಿ' ಮುಂತಾದ ಪ್ರಮುಖ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ.
ಇವರ ಪುತ್ರಿ ಚೇತನಾ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕಿಯಾಗಿ ಪರಿಚಿತರು.