ಬಾಲಕೃಷ್ಣ ಜೀವನಚರಿತ್ರೆ

  ಬಾಲಕೃಷ್ಣ ಕನ್ನಡ ಚಿತ್ರರಂಗದ ದಿಗ್ಗಜ ಧೀಮಂತ ನಟ. ಸುಮಾರು 560 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಬಗೆಯ ಪಾತ್ರಗಳಿಗೆ ತಮ್ಮ ವಿಶಿಷ್ಟ ಅಭಿನಯದಿಂದ ಜೀವ ತುಂಬಿದ ಈ ಕಲಾವಿದ ಮುಂದಿನ ಪೀಳಿಗೆಯ ಕಲಾವಿದರಿಗೆ ಸ್ಫೂರ್ತಿ. ಕನ್ನಡ ಚಿತ್ರರಂಗಕ್ಕೆ ಸ್ವಂತ ಸ್ಟುಡಿಯೋ ಬೇಕೆಂದು 1965 ರಲ್ಲಿ ತಮ್ಮೆಲ್ಲಾ ಸಂಪತ್ತನ್ನು ವ್ಯಯಿಸಿ `ಅಭಿಮಾನ ಸ್ಟುಡಿಯೋ' ಸ್ಥಾಪಿಸಿದ ಮಹಾನ್ ಚೇತನ.

  ಬಾಲ್ಯ

  1891 ನವೆಂಬರ್ 2ರಂದು ಜನಿಸಿದ ಬಾಲಕೃಷ್ಣರವರ ಬಾಲ್ಯಜೀವನ ತುಂಬಾ ಕಷ್ಟಕರವಾಗಿತ್ತು. ಇವರಿಗೆ ಬಾಲ್ಯದಲ್ಲಿ ಕಪೋಲಕ್ಕೆ ಬಿದ್ದ ಒಂದು ಏಟಿನಿಂದಾಗಿ ಕಿವುಡರಾದರು. ನಂತರ ಪತಿಯ ಚಿಕಿತ್ಸೆ ವೆಚ್ಚ ಭರಿಸಲು ಬಾಲಣ್ಣನವರ ತಾಯಿ ಇವರು ಕೇವಲ ನಾಲ್ಕು ವರ್ಷರವರಿದ್ದಾಗಲೇ 8 ರೂಪಾಯಿಗೆ ಒಬ್ಬ ಶ್ರೀಮಂತ ದಂಪತಿಗೆ ಇವರನ್ನು ಮಾರಿದರು. ತನ್ನ ದತ್ತು ಪೋಷಕರ ಕಾಟ ತಾಳಲಾರದೇ ಕೆಲ ವರ್ಷಗಳ ನಂತರ ಮನೆ ಬಿಟ್ಟು ಓಡಿ ಹೋಗಿ ಒಂದು ನಾಟಕ ಕಂಪನಿಯಲ್ಲಿ ಬ್ಯಾನರ್ ಗಳಿಗೆ ಬಣ್ಣ ಬಳಿಯುವ ಕೆಲಸಕ್ಕೆ ಸೇರಿಕೊಂಡರು. ನಂತರ ನಾಟಕ ಕಂಪನಿಯೊಂದರಲ್ಲಿ ತುಂಬಾ ಕಡಿಮೆ ವೇತನಕ್ಕಾಗಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡರು.

  ರಂಗಪ್ರವೇಶ - ಸಿನಿಪಯಣ

  ಹೀಗೆ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಒಂದು ದಿನ ಒಬ್ಬ ಕಲಾವಿದ ಅಸ್ವಸ್ಥನಾಗಿ ಅಭಿನಯಿಸಲು ಬಾರದಿದ್ದಾಗ ಆ ಪಾತ್ರವನ್ನು ಅನಿವಾರ್ಯವಾಗಿ ಬಾಲಣ್ಣ ಮಾಡಿದರು. ನಂತರ ಬಾಲಣ್ಣ ಹಿಂತುರುಗಿ ನೋಡುವ ಪ್ರಮೇಯವೇ ಬರಲಿಲ್ಲ. `ಲಕ್ಷ್ಮಾಸನ ನಾಟಕ ಕಂಪನಿ',`ಗೌರಿಶಂಕರ ನಾಟಕ ಕಂಪನಿ' ಮುಂತಾದ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ಇವರು ನಂತರ `ಗುಬ್ಬಿ ವೀರಣ್ಣ' ನಾಟಕ ಕಂಪನಿ ಸೇರಿದರು. ಒಮ್ಮೆ ಬಿ.ಆರ್.ಪಂತಲು ನಾಟಕ ವೀಕ್ಷಿಸುವಾಗ ಇವರ ಅಭಿನಯ ನೋಡಿ ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಟ್ಟರು. ನಂತರ ಡಾ.ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ ಜೋಡಿ ಹಲವಾರು ಚಿತ್ರ ನಿರ್ಮಾಪಕರ ಪ್ರಥಮ ಆದ್ಯತೆಯಾಯಿತು. ಹಾಸ್ಯನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಬಾಲಣ್ಣ ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದಾರೆ.

  ಅಭಿಮಾನ್ ಸ್ಟುಡೀಯೋ

  1934ರಿಂದ ಕನ್ನಡ ಚಿತ್ರರಂಗ ಆರಂಭವಾದರೂ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಕರ್ನಾಟಕದಲ್ಲಿ ಯಾವುದೇ ಸ್ಟುಡಿಯೋಗಳಿರಲಿಲ್ಲ. ಕನ್ನಡದ ಎಲ್ಲಾ ಚಿತ್ರಕೆಲಸಗಳು ಪಕ್ಕದ ಮದ್ರಾಸ್ ನಲ್ಲಿ ನಡೆಯುತ್ತಿದ್ದವು. 1963 ರಲ್ಲಿ ಕನ್ನಡಕ್ಕಾಗಿ ಒಂದು ಪ್ರತ್ಯೇಕ ಸ್ಟುಡಿಯೋ ಸ್ಥಾಪಿಸಬೇಕೆಂದು ಬಾಲಕೃಷ್ಣ ರೂಪುರೇಷೆ ತಯಾರು ಮಾಡಿ ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರಲ್ಲಿ ಸರಿಯಾದ ಜಾಗ ನೀಡಲು ಪ್ರಾರ್ಥಿಸಿದರು. ಆಗ ಸರ್ಕಾರ ಕೆಂಗೇರಿಯಲ್ಲಿರುವ 20 ಎಕರೆ ಭೂಮಿಯನ್ನು ಎಕರೆಗೆ 300 ರೂಪಾಯಿಯಂತೆ ಬಾಲಕೃಷ್ಣರಿಗೆ ನೀಡಿತು. 1965 ಸೆಪ್ಟೆಂಬರ್ 5ರಂದು ಸ್ಟುಡಿಯೋಗೆ ಅಡಿಗಲ್ಲು ಹಾಕಲಾಯಿತು. ಆದರೆ ಬಾಲಕೃಷ್ಣರ ಎಲ್ಲಾ ಸಂಪತ್ತನ್ನು ಸುರಿದರೂ ಸ್ಟುಡಿಯೋ ಕೆಲಸಕ್ಕೆ ಸಾಲದಾದಾಗ ಬಾಲಕೃಷ್ಣರೇ ಸಾರ್ವಜನಿಕರ ಹತ್ತಿರ ಸ್ಟುಡಿಯೋ ನಿರ್ಮಾಣಕ್ಕೆ ಚಂದಾ ಎತ್ತಿದರು. ಸ್ಟುಡಿಯೋ ನಿರ್ಮಾಣವಾದರೂ ಸಾಕಷ್ಟು ಚಿತ್ರ ನಿರ್ಮಾಪಕರು ಅತ್ಕೃಷ್ಟ ಸೌಲಭ್ಯಗಳ ಕೊರತೆಯ ಕಾರಣ ನೀಡಿ ಚಿತ್ರೀಕರಣಕ್ಕೆ ನೆರೆ ರಾಜ್ಯಗಳಿಗೆ ಹೋಗುವುದು ನಿಲ್ಲಲಿಲ್ಲ. ಹೀಗಾಗಿ ಬಾಲಣ್ಣ ತಮ್ಮ ವೃದ್ಯಾಪ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಪ್ರಸ್ತುತ ಈ ಸ್ಟುಡಿಯೋದಲ್ಲಿಯೇ ಸಾಹಸಸಿಂಹ ವಿಷ್ಣುವರ್ಧನರ ಸಮಾಧಿ ಇರುವುದು. ವಿಷ್ಣುವರ್ಧನ್ ರ ಸ್ಮಾರಕಕ್ಕಾಗಿ ಸ್ಟುಡಿಯೋದ ಎರಡು ಎಕರೆ ಜಾಗವನ್ನು ಸರ್ಕಾರ ಮೀಸಲಿರಿಸಿದೆ.

  ಕೊನೆಯ ದಿನಗಳು

  ಸ್ಟುಡಿಯೋ ಸಹವಾಸಕ್ಕೆ ಹೋಗದೇ ತಮಷ್ಟಕ್ಕೇ ತಾವಿದ್ದರೇ ಬಾಲಣ್ಣ ರಾಜರ ಹಾಗೇ ಬಾಳುತ್ತಿದ್ದರು ಎಂದು ಎಷ್ಟೋ ಕಲಾವಿದರು ಹಲುಬಿದ್ದುಂಟು. ಪತ್ನಿಯ ಮರಣ ಬಾಲಕೃಷ್ಣರವನ್ನು ಬಹುವಾಗಿ ಕಾಡಿತು. ಕೊನೆಗಾಲದಲ್ಲಿ ತಮ್ಮ ಕಿರಿಯ ಪುತ್ರಿಯ ಮನೆಯಲ್ಲಿ ಇರಲಾರಂಭಿಸಿದರು.ಕೊನೆದಿನಗಳಲ್ಲೂ ತಮ್ಮ ವೃತ್ತಿಪರೆತೆ ಮೆರೆದು ತಮ್ಮ ಕೊನೆಯ ಚಿತ್ರವಾದ `ಯಮಕಿಂಕರ' ಕ್ಕೆ ಡಬ್ ಮಾಡಿದರು. ಪ್ಯಾನಕ್ರಿಯಾಟಿಕ್ ಕ್ಯಾನ್ಸರ್ ನಿಂದ ಹಾಸಿಗೆ ಹಿಡಿದ ಬಾಲಣ್ಣನನ್ನು ನೋಡಲು ಬರುವವರ ಹತ್ತಿರ `ನನ್ನ ಹೆಂಡತಿ ನನ್ನ ಬಿಟ್ಟಿರಲಾರದೇ ನನ್ನನ್ನು ಕರೆಸಿಕೊಳ್ಳಲು ಸಿದ್ಧತೆ ಮಾಡುತ್ತಿದ್ದಾಳೆ' ಎಂದು ಹೇಳುತ್ತಿದ್ದರು. ಆಗಿನ ಮುಖ್ಯಮಂತ್ರಿ ದೇವೆಗೌಡರು ಇವರನ್ನು ಕಾಣಲು ಬಂದಾಗ ಕಷ್ಟಪಟ್ಟು ಎದ್ದು ಕುಳಿತುಕೊಂಡು ಕಣ್ಣೀರ ಹನಿಗಳೊಂದಿಗೆ ಕೈ ಜೋಡಿಸಿ `ದಯವಿಟ್ಟು ನನ್ನ ಸ್ಟುಡಿಯೋ ಉಳಿಸಿ' ಎಂದು ವಿನಂತಿಸಿಕೊಂಡಿದ್ದರು. ಆ ಸ್ಥಿತಿ ನೋಡಿ ದೇವೆಗೌಡರ ಕಣ್ಣಗಳು ತೇವವಾಗಿದ್ದವು. ಆದಾದ ಕೆಲ ದಿನಗಳ ನಂತರ 1995 ಜುಲೈ 19 ರ ಸಾಯಂಕಾಲ ಕೊನೆಯುಸಿರೆಳೆದರು. ಅಭಿಮಾನ್ ಸ್ಟುಡಿಯೋದಲ್ಲಿ ತಮ್ಮ ಪತ್ನಿಯ ಪಕ್ಕದಲ್ಲಿ ಬಾಲಣ್ಣನವರ ಸಮಾಧಿಯಿದೆ.

  ಬಾಲಣ್ಣ ಮೇಲೆ BEML ನೌಕರರ ಅಭಿಮಾನ

  ಬಾಲಣ್ಣ ತಮ್ಮ ಹಾಸ್ಯ ನಟನೆಯಿಂದ ನೂರಾರು ಅಭಿಮಾನಿಗಳನ್ನು ಸಂಪಾದಿಸಿದ್ದರೂ ಆ ಕಾಲದ ಬೆಂಗಳೂರಿನ ಬೆಮೆಲ್ BEML (ಭಾರತ್ ಅರ್ಥ ಮೂವರ್ಸ ಲಿಮಿಟೆಡ್) ನೌಕರರು ಬಾಲಣ್ಣನ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು.ಸ್ಟುಡಿಯೋಗಾಗಿ ಬಾಲಕೃಷ್ಣ ಸರ್ಕಾರದಿಂದ 5 ಲಕ್ಷ ಸಾಲ ಪಡೆದಿದ್ದರು. ಮುಂದೆ ಸ್ಟುಡಿಯೋದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಇವರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕೆಂದು ನೌಕರರು ಪ್ರತಿಭಟನೆ ಕೂಡ ಮಾಡಿದ್ದರು. ಬಾಲಕೃಷ್ಣ ನಿಧನದ ನಂತರ ರಾಜರಾಜೇಶ್ವರಿ ನಗರದ ಬೆಮೆಲ್ ಲೇಯೌಟ್ ನಲ್ಲಿ ಬಾಲಕೃಷ್ಣ ಬಯಲು ರಂಗ ಮಂದಿರ ಸ್ಥಾಪಿಸಿ ಅಭಿಮಾನ ಮೆರೆದಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X