ಗುರುರಾಜ ಕೃಷ್ಣದಾಸ ವೆಂಕಟೇಶ್ (ಜಿ.ಕೆ.ವೆಂಕಟೇಶ್) ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಖ್ಯಾತ ಸಂಗೀತ ನಿರ್ದೇಶಕ, ಹಿನ್ನಲೆ ಗಾಯಕ, ನಟ ಮತ್ತು ನಿರ್ಮಾಪಕ. 60 ರ ದಶಕದಿಂದ ಸುಮಾರು 90 ರ ದಶಕದವರೆಗೆ ಕನ್ನಡ, ತಮಿಳು ,ಮಲಯಾಳಂ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಜಿ.ಕೆ.ವೆಂಕಟೇಶ್ ಕನ್ನಡಕ್ಕೆ ಹಲವಾರು ಅದ್ಭುತ ಚಿತ್ರಗೀತೆಗಳನ್ನು ಕೊಟ್ಟಿದ್ದಾರೆ. ಕನ್ನಡ ಚಿತ್ರಗಳಿಗೆ ಪಾಶ್ಚಾತ್ಯ ಹಿನ್ನಲೆ ಸಂಗೀತ ಪರಿಚಯಿಸಿದ ಶ್ರೇಯ ಇವರಿಗೆ ಸಲ್ಲಬೇಕು.
1927 ಸೆಪ್ಟೆಂಬರ್ 21 ರಂದು ಹೈದರಾಬಾದಿನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಸಂಗೀತದಲ್ಲಿ ಆಸಕ್ತಿಯಿದ್ದ ವೆಂಕಟೇಶ್ ತಮ್ಮ ಸಹೋದರನಿಂದ ವೀಣೆ ಕಲಿತರು. ನಂತರ ಹಲವು ಸಂಗೀತ ದಿಗ್ಗಜರ ಬಳಿಯಲ್ಲಿ ವೀಣಾವಾದನ ಮಾಡಿಕೊಂಡಿದ್ದ ಇವರು ಆಲ್ ಇಂಡಿಯಾ ಬೆಂಗಳೂರಿನಲ್ಲಿ ಗಾಯಕನಾಗಿ ಕಾರ್ಯ ನಿರ್ವಹಿಸಿದರು. 1952 ರಲ್ಲಿ ಒಂದು ಮಲಯಾಳಂ ಚಿತ್ರಕ್ಕೆ ಸಂಗೀತ ಸಂಯೋಜಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇವರ ಸಂಗೀತ ಸಂಯೋಜನೆ ನೀಡಿದ ಎರಡನೇ ಚಿತ್ರ ಡಾ.ರಾಜಕುಮಾರ್ ಅಭಿನಯದ `ಸೋದರಿ'. ನಂತರ ಕನ್ನಡದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಾದರು.
ಖ್ಯಾತ ಗಾಯಕ ಪಿ.ಬಿ.ಶ್ರೀನಿವಾಸ ಮತ್ತು ಇಳಯರಾಜರವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಳಯರಾಜ ಜಿ.ಕೆ.ವೆಂಕಟೇಶ್ ರ ಸುಮಾರು ಎರಡು ನೂರು ಚಿತ್ರಗಳಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಜೀವನದ ಸಂದ್ಯಾಕಾಲದಲ್ಲಿ ಚಿತ್ರನಿರ್ಮಾಣ ಮಾಡಲು ಹೋಗಿ ನಷ್ಟದಲ್ಲಿದ್ದ ವೆಂಕಟೇಶ್ ರವರಿಗೆ ಶಿಷ್ಯ ಇಳಯರಾಜ ನೆರವಾದರು.
ಡಾ.ರಾಜಕುಮಾರ್ ರವರ ಐವತ್ತಕ್ಕಿಂತ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿರುವ ಜಿಕೆವಿ ರಾಜ್ ರಿಗೆ ಹಾಡುವಂತೆ ಸದಾ ಪ್ರೋತ್ರಾಹಿಸುತ್ತಿದ್ದರು. ರಾಜ್ ರ ಬಾಂಡ್ ಶೈಲಿಯ ಚಿತ್ರಗಳಿಗೆ ಪಾಶ್ಚಾತ್ಯ ಹಿನ್ನಲೆ ಸಂಗೀತ ಒದಗಿಸಿದ್ದು ವಿಶೇಷ. ತಮ್ಮ ಚಿತ್ರಗಳಲ್ಲಿ ಖ್ಯಾತ ಗಾಯಕ ಬೀಮಸೇನ ಜೋಷಿಯವರಿಂದ ಗಾಯನ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ರಿಂದ ಶೆಹನಾಯಿ ನುಡಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ. ಕನ್ನಡದಲ್ಲಿ ಸಹನಟರೊಂದಿಗೆ ಸೇರಿ `ರಣಧೀರ ಕಂಠೀರವ', `ಇಮ್ಮಡಿ ಪುಲಕೇಶಿ' ಚಿತ್ರಗಳನ್ನು ನಿರ್ಮಿಸಿದ್ದರು.
1993 ನವೆಂಬರ್ 13 ರಂದು ಚೆನ್ನೈನಲ್ಲಿ ವಿಧಿವಶರಾದರು.