1949ರ ಏಪ್ರಿಲ್ 4ರಂದು ಮುಂಬೈ ನಗರದಲ್ಲಿ ಜನಿಸಿದ ಮನ್ ದೀಪ್ ರಾಯ್ ಮಿಂಚಿದ್ದು ಕನ್ನಡ ಚಿತ್ರರಂಗದಲ್ಲಿ. ಮಿಂಚಿನ ಓಟ ಚಿತ್ರದ ಮೂಲಕ ತನ್ನ ಸಿನಿಮಾ ಓಟವನ್ನು ಆರಂಭಿಸಿದ ಮನ್ ದೀಪ್ ರಾಯ್, ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತರಕ್ಷಕ, ಆಂಟಿ ಪ್ರೀತ್ಸೆ, ಪ್ರೀತ್ಸೋದ್ ತಪ್ಪಾ, ಓ ಪ್ರೇಮವೆ, ಸಂಕಷ್ಟಕರ ಗಣಪತಿ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇಂದಿಗೂ ಇವರ ನಟನೆಯ ಹಾಸ್ಯ ದೃಶ್ಯಗಳನ್ನು ನೋಡಿ ನಕ್ಕು ಮನರಂಜನೆ ಪಡೆವ ಪ್ರೇಕ್ಷಕರಿದ್ದಾರೆ. ಪುನೀತ್ ರಾಜ್‌ಕುಮಾರ್, ಸುದೀಪ್ ಹಾಗೂ ದರ್ಶನ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲೂ ಮನ್ ದೀಪ್ ರಾಯ್ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
2022ರ ಡಿಸೆಂಬರ್ ತಿಂಗಳಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದ ಮಂದೀಪ್ ರಾಯ್, ಜನವರಿ 29ರಂದು ಬಾರದ ಊರಿಗೆ ಪಯಣ ಬೆಳೆಸಿದರು.