ನಿನಾದ್ ಹರಿತ್ಸ ಕನ್ನಡ ಕಿರುತೆರೆ ಜನಪ್ರಿಯ ನಟ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರ ತಾಯಿಯ ಹೆಸರು ಮಾಲಿನಿ ಪಿ ರಾವ್ ಹಾಗೂ ತಂದೆ ಪ್ರಸನ್ನ ರಾವ್. ಚಿಕ್ಕಂದಿನಿಂದಲೂ ತಂದೆ, ತಾಯಿ ಮೊದಲಾದವರ ಅಭಿನಯ ನೋಡಿಕೊಂಡೇ ಬೆಳೆದ ನಿನಾದ್, ಏಳನೇ ವರ್ಷದವರಿದ್ದಾಗಲೇ 'ಟೈಮ್ ಪಾಸ್ ತೆನಾಲಿ' ಎನ್ನುವ ಧಾರಾವಾಹಿಯಲ್ಲಿ ಬಾಲನಟನಾಗಿ ರಂಗ ಪ್ರವೇಶಿಸಿದರು. ಬಳಿಕ 'ಕುಬೇರಪ್ಪ ಆಂಡ್ ಸನ್ಸ್' ಎನ್ನುವ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಜೊತೆಗೆ ಶಾಲಾ-ಕಾಲೇಜು ಗಳಲ್ಲಿ ಕೂಡ ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ರಂಗಭೂಮಿ
ನಟನೆಯ ಪಟ್ಟುಗಳನ್ನು ಕಲಿಯಲು ರಂಗಭೂಮಿಗೆ ಸೇರಿಕೊಂಡ ನಿನಾದ್, ತ್ರೀ ರೋಸಸ್ ಎನ್ನುವ ನಾಟಕದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದರು. ಈ ನಾಟಕಕ್ಕೆ ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನಿನಾದ್ ತಾಯಿ ಕೂಡ ನಟಿಯಾಗಿದ್ದು, ಹಲವಾರು ಧಾರವಾಹಿಗಳಲ್ಲಿ ಅಭಿನಯಿಸಿದ್ದರು. lಒಬ್ಬ ಯುವನಟನಾಗಿ ಕಿರುತೆರೆ ಅಥವಾ ಸಿನಿಮಾ ರಂಗ ಪ್ರವೇಶಿಸುವ ಮುನ್ನ ಅಭಿನಯ ಪಾಠ ಅರಿತುಕೊಂಡೇ ಇರಬೇಕು ಎನ್ನುವುದು ನಿನಾದ್ ಆಶಯವಾಗಿತ್ತು. ಹಾಗಿಯೇ ನಟನೆಯ ಪಟ್ಟುಗಳನ್ನು ಕಲಿಯಲು ರಂಗಭೂಮಿಗೆ ಸೇರಿಕೊಂಡರು. ಅಲ್ಲಿ ನಟನೆಗಿಂತ ಬ್ಯಾಕ್‌ಸ್ಟೇಜ್ ಕೆಲಸಗಳು, ಮೇಕಪ್ ವಿಭಾಗಗಳಲ್ಲಿ ಕೆಲಸ ಮಾಡಿದ್ದೇ ಹೆಚ್ಚಂತೆ.
ಭಾರತದಾದ್ಯಂತ ಪರ್ಯಟನೆ
ನಿರ್ದೇಶಕ ಅಕ್ಷಯ್ ಕಾರ್ತಿಕ್ ಅವರು ನಿನಾದ್‌ಗೆ ಮೆಂಟರ್ ಎಂದೇ ಹೇಳಬಹುದು. 'ಗುಲೇಬ ಕಾವಲಿ' ನಾಟಕದಲ್ಲಿ ಎಂ ಎಸ್ ಸತ್ಯು ಅವರೊಂದಿಗೆ ಕೆಲಸ ಮಾಡುವ ಅವಕಾಶ ನಿನಾದ್ ಅವರಿಗೆ ಲಭಿಸಿತು. ಮುಂದೆ ಸ್ವಪ್ನ ಸಿದ್ಧಿ' ಸೇರಿದಂತೆ ಒಂದಷ್ಟು ನಾಟಕಗಳಲ್ಲಿ ಮಾಡಿದರು. ಹೆಚ್ಚು ನಾಟಕಗಳಲ್ಲಿ ಮಾಡದಿದ್ದರೂ ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು, ಅಸ್ಸಾಮ್, ಷಿಲ್ಲಾಂಗ್ ಹೀಗೆ 'ಥಗ್ಸ್ ಥಿಯೇಟರ್ಸ್' ಜೊತೆಗೆ ಭಾರತದಾದ್ಯಂತ ಕೆಲಸ ಮಾಡುವ ಅವಕಾಶ ಲಭಿಸಿತ್ತು.
ಕಿರುತೆರೆ
ನಿನಾದ್ 'ಅರಮನೆ' ಎನ್ನುವ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಈ ಸೀರಿಯಲ್‌ನಲ್ಲಿ ಜೈ ಜಗದೀಶ್ ಅವರ ಪುತ್ರನ ಪಾತ್ರ ದೊರಕಿತ್ತು. ಇದರಲ್ಲಿ ಎರಡೂವರೆ ವರ್ಷಗಳ ಕಾಲ ನಟಿಸಿದ ಬಳಿಕ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ಸಹ ನಾಯಕನಾಗಿ ಸುಮಾರು ಎರಡು ವರ್ಷ ನಟಿಸಿದರು. ನಂತರ ಜೀ ಕನ್ನಡವಾಹಿಯಲ್ಲಿ ಪ್ರಸಾರವಾದ 'ನಾಗಿಣಿ 2' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಪಡೆದರು.