ಸುನಿಲ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ, ಗಾಯಕ ಮತ್ತು ಗೀತಸಾಹಿತಿ. ಖ್ಯಾತ ಹಿನ್ನಲೆ ಗಾಯಕಿ ಮತ್ತು ಸುಗಮ ಸಂಗೀತಗಾರ್ತಿ ಬಿ.ಕೆ.ಸುಮಿತ್ರಾ ಅವರ ಪುತ್ರನಾಗಿರುವ ಇವರು, 1978ರ ಸೆಪ್ಟಂಬರ್ 4ರಂದು ಜನಿಸಿದರು. ಇವರ ಸಹೋದರಿ ಸೌಮ್ಯ ರಾವ್ ಕೂಡ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸುನೀಲ್ ಜಯನಗರದ ನ್ಯಾಷನಲ್ ಕಾಲೇಜಿನ ವಿಧ್ಯಾಭ್ಯಾಸ ಮುಗಿಸಿದ್ದಾರೆ.
ವೃತ್ತಿಜೀವನ
ಸುನೀಲ್ ರಾವ್ 1987ರಲ್ಲಿ ತೆರೆಕಂಡ ಕೆಂಡದ ಮಳೆ ಹಾಗೂ ಏಳು ಸುತ್ತಿನ ಕೋಟೆ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿದರು. 2003ರಲ್ಲಿ ತೆರೆಕಂಡ 'ಫ್ರೀಕಿ ಚಕ್ರ' ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. ನಂತರ ಕವಿತ ಲಂಕೇಶ್ ನಿರ್ದೇಶನದ 'ಪ್ರೀತಿ ಪ್ರೇಮ ಪ್ರಣಯ' ಸಿನಿಮಾದಲ್ಲಿ ನಟಿಸಿದರು.
2003ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ 'ಎಕ್ಸ್‌ಕ್ಯೂಸ್ ಮಿ' ಸಿನಿಮಾ ಬಿಗ್ ಬ್ರೇಕ್ ನೀಡಿತು. ಆನಂತರ ಚಪ್ಪಾಳೆ, ಮಸಾಲಾ, ಜಾಕ್ ಪಾಟ್, ಬಾ ಬಾರೋ ರಸಿಕ, ತುರ್ತು ನಿರ್ಗಮನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪ್ರಶಸ್ತಿ: 2011ರಲ್ಲಿ ಸುನೀಲ್ ಅವರಿಗೆ ರೂಪಕಲಾ ಬೆಳ್ಳಿ ಕಣ್ಮಣಿ ಪ್ರಶಸ್ತಿ ಲಭಿಸಿದೆ.