twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿಮಾಗಳು ನಿರ್ಮಿಸಿರುವ ಅಪರೂಪದ ದಾಖಲೆಗಳಿವು

    By ಫಿಲ್ಮಿಬೀಟ್ ಡೆಸ್ಕ್
    |

    ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಾವುದು ಬೆಸ್ಟ್ ಎಂದರೆ ಕನ್ನಡ ಸಿನಿಮಾ ಪ್ರೇಮಿಯೂ ಒಂದೆರಡು ಬಾರಿ ಯೋಚಿಸಿ ಬೇರೆ ಚಿತ್ರರಂಗದ ಹೆಸರು ಹೇಳುವ ಅನಿವಾರ್ಯತೆ ಇದೆ. ಅದಕ್ಕೆ ಕಾರಣಗಳು ಅನೇಕ. ಆ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿದೆ.

    ತಮಿಳು, ತೆಲುಗು ಚಿತ್ರರಂಗಗಳು ಅದ್ಧೂರಿತನದಿಂದ ಹೆಸರು ಮಾಡುತ್ತಿದ್ದರೆ ಮಲಯಾಳಂ ಸಿನಿಮಾ ತಮ್ಮ ಕಂಟೆಂಟ್ ನಿಂದ ಜಗತ್ತಿನಾದ್ಯಂತ ಗುರುತಾಗಿದೆ. ಕನ್ನಡ ಚಿತ್ರರಂಗ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಪ್ರಯತ್ನದಲ್ಲಿ ನಿರತವಾಗಿದೆಯಾದರೂ ಯಾವದರಲ್ಲೂ 'ದಿ ಬೆಸ್ಟ್' ಎಂಬ ಹಂತಕ್ಕೆ ಏರಲಾಗಿಲ್ಲ.

    ಹಾಗೆಂದು ಕನ್ನಡ ಚಿತ್ರರಂಗವನ್ನು ಕಳಪೆ ಎಂದೆನ್ನಲೂ ಯಾವ ಕೋನದಿಂದಲೂ ಸಾಧ್ಯವಿಲ್ಲ. ಅತ್ಯದ್ಭುತ ಸಿನಿಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ಕನ್ನಡ ನೀಡಿದೆ. ಒಂದು ಕಾಲವಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾವನ್ನು ನೋಡಲು ಚೆನ್ನೈ, ಹೈದರಾಬಾದ್‌ಗಳಿಂದ ಕಾರು ಮಾಡಿಕೊಂಡು ಅಲ್ಲಿನ ನಿರ್ದೇಶಕರು ಬರುತ್ತಿದ್ದರು. ಅಣ್ಣಾವ್ರ ಸಿನಿಮಾಗಳು ಮಾಡಿದಷ್ಟು ಕಲೆಕ್ಷನ್ ಅನ್ನು ಭಾರತದ ಇನ್ಯಾವ ನಟನ ಸಿನಿಮಾಗಳು ಸಹ ಮಾಡುತ್ತಿರಲಿಲ್ಲ. ಕರ್ನಾಟಕ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಧನ, ತೆರಿಗೆ ವಿನಾಯಿತಿಗೆ ಆಕರ್ಷಿತಗೊಂಡು ಬಹಳ ಮಂದಿ ತಮಿಳು, ತೆಲುಗು ನಿರ್ದೇಶಕರು ಕನ್ನಡ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದರು. ಇದೇ ಕಾರಣ ಮಣಿರತ್ನಂ ಸೇರಿ ಇನ್ನೂ ಹಲವಾರು ಮಂದಿ ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡಿದರು. ಕನ್ನಡ ಚಿತ್ರದ ಘನತೆ ಸಾರುವ ಇಂಥಹಾ ಅನೇಕ ಉದಾಹರಣೆಗಳು ಇಲ್ಲಿವೆ.

    ಕನ್ನಡದ ಮೊದಲ ನಾಯಕ ನಟ ಯಾರು?

    ಕನ್ನಡದ ಮೊದಲ ನಾಯಕ ನಟ ಯಾರು?

    ಕನ್ನಡದ ಮೊದಲ ಸಿನಿಮಾ 'ಸತಿ ಸುಲೋಚನಾ' 1934ರಲ್ಲಿ ಬಿಡುಗಡೆ ಆಯ್ತಾದರೂ ಅದಕ್ಕೆ ಮುನ್ನಾ ಸುಮಾರು 1921ರಿಂದ 1933ರ ನಡುವೆ ಸುಮಾರು 175 ಸಿನಿಮಾಗಳನ್ನು ಕರ್ನಾಟದಲ್ಲಿ ನಿರ್ಮಿಸಲಾಗಿತ್ತು ಆದರೆ ಅವುಗಳು ಮೂಕಿ ಸಿನಿಮಾ ಆಗಿದ್ದ ಕಾರಣ ಕನ್ನಡದ ಮೊದಲ ಸಿನಿಮಾ 'ಸತಿ ಸುಲೋಚನಾ' ಎಂದೆನ್ನಲಾಗುತ್ತದೆ. 1921ರಲ್ಲಿ ಮೈಸೂರು ಅರಮನೆಯಲ್ಲಿ ಪ್ರದರ್ಶನವಾದ 'ನಿರುಪಮಾ' ನಾಟಕವನ್ನು ವಿಡಿಯೋ ರೆಕಾರ್ಡ್ ಮಾಡಿ ಪ್ರದರ್ಶಿಸಿದ್ದು ಕನ್ನಡದ ಮೊದಲ ಸಿನಿಮಾ ಎಂದು ಇತಿಹಾಸಕಾರರು ಗುರುತಿಸುತ್ತಾರೆ. ಆ ಸಿನಿಮಾಕ್ಕೆ ಕಂಠೀರವ ನರಸಿಂಹರಾಜ ಒಡೆಯರು ನಿರ್ಮಾಪಕರು. ನಾಟಕದಲ್ಲಿ ನಟಿಸಿದ್ದ ಎ.ವಿ.ವರದಾಚಾರರು ಕನ್ನಡದ ಮೊದಲ ನಾಯಕ ನಟ!

    ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾದೇವಿ ಚಟ್ಟೊಪಾಧ್ಯಾಯ ನಟಿಸಿದ್ದ ಸಿನಿಮಾ

    ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾದೇವಿ ಚಟ್ಟೊಪಾಧ್ಯಾಯ ನಟಿಸಿದ್ದ ಸಿನಿಮಾ

    ಕನ್ನಡದ ಖ್ಯಾತ ಬರಹಗಾರ ಟಿ.ಪಿ.ಕೈಲಾಸಂ ಮತ್ತು ಭಾರತ ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರುಗಳು ಕನ್ನಡದ ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸಿದ್ದರು. ಸಿನಿಮಾದ ಹೆಸರು 'ಮಚ್ಛಕಟಿಕ' ಶೂದ್ರಕ ರಚಿಸಿದ ಕಾದಂಬರಿಯನ್ನು ಸಿನಿಮಾ ಮಾಡಲಾಗಿತ್ತು. ಇದು ಮೂಕಿ ಸಿನಿಮಾ ಆಗಿತ್ತು. ಸಿನಿಮಾವು 1931ರಲ್ಲಿ ತೆರೆ ಕಂಡಿತ್ತು. ಕನ್ನಡದ ಮೊದಲ ಆರ್ಟ್ ಸಿನಿಮಾ ಅಥವಾ ಪರ್ಯಾಯ ಸಿನಿಮಾ ಇದೇ. ಭಾರತದ ಇತರೆ ಚಿತ್ರರಂಗಗಳು ಇನ್ನೂ ಪೌರಾಣಿಕ ಕತೆಯ ಸಿನಿಮಾಗಳಲ್ಲಿ ತೊಡಗಿದ್ದಾಗಲೇ ಕನ್ನಡದಲ್ಲಿ ಪರ್ಯಾಯ ಸಿನಿಮಾದ ಜನನವಾಗಿತ್ತು.

    ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ

    ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ

    ಬಹುತೇಕರಿಗೆ ಗೊತ್ತಿರುವಂತೆ 'ಬೇಡರ ಕಣ್ಣಪ್ಪ' ಡಾ.ರಾಜ್‌ಕುಮಾರ್ ಅವರ ಮೊದಲ ಸಿನಿಮಾ ಅಲ್ಲ. ಅಣ್ಣಾವ್ರ ಮೊದಲ ಸಿನಿಮಾ 'ಶ್ರೀನಿವಾಸ ಕಲ್ಯಾಣ' ಅದು 1950ರಲ್ಲಿ ಬಿಡುಗಡೆ ಆಗಿತ್ತು. ಅದರಲ್ಲಿ ಬಹಳ ಸಣ್ಣ ಪಾತ್ರದಲ್ಲಿ ಡಾ.ರಾಜ್‌ಕುಮಾರ್ ನಟಿಸಿದ್ದರು. ನಂತರ 1954ರಲ್ಲಿ ಬಿಡುಗಡೆ ಆದ 'ಬೇಡರ ಕಣ್ಣಪ್ಪ' ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದರು. ವಿಶೇಷವೆಂದರೆ ಕನ್ನಡಕ್ಕೆ ಮೊದಲ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ 'ಬೇಡರ ಕಣ್ಣಪ್ಪ'.

    ಅತಿ ಹೆಚ್ಚು ಪ್ರಾಯೋಗಿಕ ಸಿನಿಮಾಗಳು

    ಅತಿ ಹೆಚ್ಚು ಪ್ರಾಯೋಗಿಕ ಸಿನಿಮಾಗಳು

    ಕನ್ನಡದಲ್ಲಿ ಬಿಡುಗಡೆ ಆದಷ್ಟು ಪ್ರಾಯೋಗಿಕ ಸಿನಿಮಾಗಳು ದಕ್ಷಿಣ ಭಾರತದ ಇನ್ಯಾಯುವುದೇ ಚಿತ್ರರಂಗದಲ್ಲಿ ಆಗಿಲ್ಲ. ಹಲವಾರು ಕಾದಂಬರಿಗಳು ಕನ್ನಡದಲ್ಲಿ ಸಿನಿಮಾಗಳಾಗಿವೆ. ಅಷ್ಟೇ ಅಲ್ಲದೆ ಕನ್ನಡ ಸಿನಿಮಾಗಳಿಗೆ ಬಂದಷ್ಟು ಅಂತರಾಷ್ಟ್ರೀಯ ಪ್ರಶಸ್ತಿಗಳು ಸಹ ದಕ್ಷಿಣದ ಇನ್ನಾವುದೇ ಭಾಷೆಯ ಸಿನಿಮಾಗಳಿಗೆ ಬರುತ್ತಿರಲಿಲ್ಲ ಎಂಬುದು ಸಹ ಗಮನಿಸಬೇಕಾದ ಅಂಶ. 'ಸಂಸ್ಕಾರ', 'ಘಟಶ್ರಾಧ್ಧ', 'ಎಡಕಲ್ಲು ಗುಡ್ಡದ ಮೇಲೆ', 'ನಾಗರಹಾವು' ಕೆಲವು ಮುಖ್ಯ ಕಾದಂಬರಿ ಆಧರಿತ ಸಿನಿಮಾಗಳು. ತಾರಾಸು, ಕಾರಂತರು, ಅನಂತಮೂರ್ತಿ, ಎಂಕೆ ಇಂದಿರಾ ಇನ್ನೂ ಹಲವರ ಕಾದಂಬರಿಗಳು ಸಿನಿಮಾಗಳಾಗಿ ಹಲವು ಪ್ರಶಸ್ತಿಗಳನ್ನು ಗಳಿಸಿವೆ.

    ಮೊದಲ ಬಾರಿಗೆ ಸ್ಲೋ ಮೋಷನ್ ಹಾಡು

    ಮೊದಲ ಬಾರಿಗೆ ಸ್ಲೋ ಮೋಷನ್ ಹಾಡು

    ಪುಟ್ಟಣ್ಣ ಕಣಗಾಲರು ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಪುಟ್ಟಣ್ಣನವರು 1972 ರಲ್ಲಿ ನಿರ್ದೇಶಿಸಿದ್ದ 'ನಾಗರಹಾವು' ಸಿನಿಮಾವು ಆಗಿನ ಕಾಲಕ್ಕೆ ಬಹಳ ದೊಡ್ಡ ಹಿಟ್. ಕನ್ನಡ ಸಿನಿಮಾ ಇತಿಹಾಸದಲ್ಲಿ ದಾಖಲಾದ ಸಿನಿಮಾ ಅದು. ಆ ಸಿನಿಮಾದಲ್ಲಿ 'ಬಾರೆ, ಬಾರೆ' ಎಂಬ ಹಾಡೊಂದಿದೆ. ಸ್ಲೋ ಮೋಷನ್‌ನಲ್ಲಿ ಇಡೀಯ ಹಾಡನ್ನು ಪುಟ್ಟಣ್ಣನವರು ಚಿತ್ರೀಕರಣ ಮಾಡಿದ್ದಾರೆ. ಈ ಹಾಡು ಭಾರತ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಸ್ಲೋ ಮೋಷನ್‌ನಲ್ಲಿ ಚಿತ್ರೀಕರಿಸಲಾದ ಹಾಡು ಇದು. 'ನಾಗರಹಾವು' ಸಿನಿಮಾ ವಿಷ್ಣುವರ್ಧನ್, ಅಂಬರೀಶ್‌ ಅವರನ್ನು ಕನ್ನಡ ಸಿನಿಮಾಕ್ಕೆ ಪರಿಚಯಿಸಿದ ಸಿನಿಮಾ. ಜೊತೆಗೆ ಈ ಸಿನಿಮಾ ಹಿಂದಿ ಸೇರಿ ಹಲವು ಭಾಷೆಗಳಿಗೆ ರೀಮೇಕ್ ಆಯಿತು.

    ಗಿರೀಶ್ ಕಾಸರವಳ್ಳಿಯವರದ್ದು ಹೆಮ್ಮೆ ಪಡಬೇಕಾದ ದಾಖಲೆ

    ಗಿರೀಶ್ ಕಾಸರವಳ್ಳಿಯವರದ್ದು ಹೆಮ್ಮೆ ಪಡಬೇಕಾದ ದಾಖಲೆ

    ನಿರ್ದೇಶಕ ಗಿರೀಶ್ ಕಾಸರವಳ್ಳಿಯವರದ್ದು ವಿಶೇಷ ದಾಖಲೆ ಇದೆ. ಭಾರತದ ಖ್ಯಾತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ನಂತರ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿಗಳನ್ನು ಪಡೆದ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಇನ್ಯಾವ ಭಾಷೆಯ ಸಿನಿಮಾ ನಿರ್ದೇಶಕ ಸಿನಿಮಾಗಳು ಸಹ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಷ್ಟು ರಾಷ್ಟ್ರ ಪ್ರಶಸ್ತಿ ಪಡೆದಿಲ್ಲ. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿರುವ 'ಘಟಶ್ರಾಧ್ಧ', 'ತಬರನ ಕತೆ', 'ಬಣ್ಣದ ವೇಷ', 'ಮನೆ', ಹಿಂದಿಯ 'ಏಕ್ ಘರ್', 'ಕ್ರೌರ್ಯ', 'ತಾಯಿ ಸಾಹೇಬ', 'ದ್ವೀಪ', 'ಹಸೀನಾ', 'ಗುಲಾಬಿ ಟಾಕೀಸ್', 'ಕನಸೆಂಬೊ ಕುದುರೆಯನೇರಿ' 'ಕೂರ್ಮಾವತಾರ' ಸಿನಿಮಾಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿವೆ. 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಸಿನಿಮಾವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡುತ್ತಿದ್ದಾರೆ.

    ಗಿನ್ನೇಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ 'ಶಾಂತಿ' ಸಿನಿಮಾ

    ಗಿನ್ನೇಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ 'ಶಾಂತಿ' ಸಿನಿಮಾ

    ಕನ್ನಡದ 'ಶಾಂತಿ' ಸಿನಿಮಾ ಗಿನ್ನೇಸ್ ವಿಶ್ವದಾಖಲೆಗೆ ಸೇರಿದೆ. ಅತ್ಯಂತ ಕಡಿಮೆ ನಟರಿರುವ ಸಿನಿಮಾಗಳ ಪಟ್ಟಿಯಲ್ಲಿ ಇದು ವಿಶ್ವದಾಖಲೆ ಸೇರಿದೆ. ಬರಗೂರು ರಾಮಚಂದ್ರಪ್ಪನವರು 2005ರಲ್ಲಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ಕೇವಲ ಒಬ್ಬರೇ ನಟರಿರುವುದು ವಿಶೇಷ. ಹೌದು, ನಟಿ ಭಾವನಾ ಒಬ್ಬರನ್ನು ಬಿಟ್ಟರೆ ಸಿನಿಮಾದಲ್ಲಿ ಇನ್ನಾವ ನಟರೂ ತೆರೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾದ ಇತರ ಪಾತ್ರಗಳನ್ನು ಧ್ವನಿಯ ಮೂಲಕ ಅಷ್ಟೆ ಗುರುತಿಸಬಹುದಾಗಿದೆ. ಸಿನಿಮಾದಲ್ಲಿ ಭಾವನಾ ಅವರೇ ಮಹಾತ್ಮಾ ಗಾಂಧಿ, ಬುದ್ಧನ ವೇಷ ಧರಿಸುತ್ತಾರೆ. ಸಿನಿಮಾದಲ್ಲಿ ಪಾರಿವಾಳ, ಬಂದೂಕುಗಳನ್ನು ಸಂಕೇತಗಳ ರೂಪದಲ್ಲಿ ಬಳಸಲಾಗಿದೆ. ಒಬ್ಬರೇ ನಟರಿರುವ ಸಿನಿಮಾಗಳು ಭಾರತದಲ್ಲಿ ಎರಡೇ ತಯಾರಾಗಿವೆ ಅದರಲ್ಲಿ ಒಂದು 'ಶಾಂತಿ'. 1964ರಲ್ಲಿ ಸುನಿಲ್ ದತ್ (ಸಂಜಯ್ ದತ್ ತಂದೆ) ನಿರ್ದೇಶಿಸಿ ನಿರ್ಮಿಸಿದ್ದ 'ಯಾದೆ' ಸಿನಿಮಾದಲ್ಲಿ ಅವರೊಬ್ಬರೇ ನಟಿಸಿದ್ದರು. ಸುನಿಲ್ ದತ್ ಪತ್ನಿ ನರ್ಗಿಸ್‌ರ ಧ್ವನಿ ಮಾತ್ರ ಸಿನಿಮಾದಲ್ಲಿತ್ತು. 'ಶಾಂತಿ' ಸಿನಿಮಾಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿತ್ತು.

    ಮೊದಲ ಬಾರಿಗೆ ನೀರಿನಾಳದಲ್ಲಿ ಚಿತ್ರೀಕರಣ ಮಾಡಿದ ಶಂಕರ್ ನಾಗ್

    ಮೊದಲ ಬಾರಿಗೆ ನೀರಿನಾಳದಲ್ಲಿ ಚಿತ್ರೀಕರಣ ಮಾಡಿದ ಶಂಕರ್ ನಾಗ್

    ಪ್ರಯೋಗಶೀಲ ಸಿನಿಮಾ ಕರ್ಮಿ ಶಂಕರ್ ನಾಗ್ ಸೃಷ್ಟಿಸಿದ ಮೊದಲುಗಳು ಹಲವು. ಸ್ಟಾರ್ ನಟರಾಗಿದ್ದ ಶಂಕರ್ ನಾಗ್ ಪ್ರಯೋಗಶೀಲ, ಧೈರ್ಯವಂತ ನಿರ್ದೇಶಕರೂ ಆಗಿದ್ದರು. ನಿರ್ದೇಶಕರಾಗಿ ಶಂಕರ್ ನಾಗ್ ನೀಡಿದ ಸಿನಿಮಾ ಹಾಗೂ 'ಮಾಲ್ಗುಡಿ ಡೇಸ್' ಧಾರಾವಾಹಿ ಕನ್ನಡದ ಕಲ್ಟ್‌ಗಳು. ಡಾ.ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿ ಶಂಕರ್ ನಾಗ್ ನಿರ್ದೇಶಿಸಿದ್ದ 'ಒಂದು ಮುತ್ತಿನ ಕತೆ' ಸಿನಿಮಾದಲ್ಲಿ ಮೊದಲ ಬಾರಿಗೆ ನೀರಿನ ಆಳದಲ್ಲಿ ಚಿತ್ರೀಕರಣ ಮಾಡಲಾಯಿತು. ಹೀಗೆ ನೀರಿನ ಒಳಗೆ ಚಿತ್ರೀಕರಣ ಮಾಡಿದ್ದು ಭಾರತ ಚಿತ್ರರಂಗದಲ್ಲಿ ಅದೇ ಮೊದಲಾಗಿತ್ತು. 1987ರಲ್ಲಿ 'ಒಂದು ಮುತ್ತಿನ ಕತೆ' ಸಿನಿಮಾ ಬಿಡುಗಡೆ ಆದ ನಂತರ ಹಲವರು ನೀರಿನಾಳದಲ್ಲಿ ಚಿತ್ರೀಕರಣ ಮಾಡುವ ಸಾಹಸಕ್ಕೆ ಕೈ ಹಾಕಿದರು.

    500ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆ ಆದ ಸಿನಿಮಾ

    500ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆ ಆದ ಸಿನಿಮಾ

    ಉಪೇಂದ್ರ ನಿರ್ದೇಶಿಸಿ, ಶಿವರಾಜ್ ಕುಮಾರ್ ನಟಿಸಿರುವ 'ಓಂ' ಸಿನಿಮಾದ್ದಂತೂ ವಿಶ್ವ ದಾಖಲೆಯೇ ಸರಿ. ಈ ಸಿನಿಮಾ ಮರು ಬಿಡುಗಡೆ ಆದಷ್ಟು ಬಾರಿ ಭಾರತದ ಇನ್ಯಾವ ಸಿನಿಮಾ ಸಹ ಮರು ಬಿಡುಗಡೆ ಆಗಿಲ್ಲ. ಈ ವರೆಗೆ 500ಕ್ಕೂ ಹೆಚ್ಚು ಬಾರಿ 'ಓಂ' ಸಿನಿಮಾ ಮರು ಬಿಡುಗಡೆ ಆಗಿದೆ. ಪ್ರತಿಬಾರಿ ಹಿಟ್ ಆಗಿದೆ. ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾ ಆಗಿರುವ 'ಓಂ' ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ಕತೆ ಹೇಳುವ ಸಂಪ್ರದಾಯಸ್ಥ ಬಗೆಯನ್ನು ಒಡೆದು ಪುನಃ ಕಟ್ಟಿತು. ನಿಜವಾದ ರೌಡಿಗಳನ್ನು ಸಿನಿಮಾದಲ್ಲಿ ಬಳಸಿದ ಮೊದಲ ಸಿನಿಮಾ ಸಹ 'ಓಂ'.

    ಮಲ್ಟಿಫ್ಲೆಕ್ಸ್‌ನಲ್ಲಿ ಒಂದು ವರ್ಷ ಓಡಿದ ಮೊದಲ ಸಿನಿಮಾ

    ಮಲ್ಟಿಫ್ಲೆಕ್ಸ್‌ನಲ್ಲಿ ಒಂದು ವರ್ಷ ಓಡಿದ ಮೊದಲ ಸಿನಿಮಾ

    'ಮುಂಗಾರು ಮಳೆ' ಸಿನಿಮಾ ಸಹ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾದ ಸಿನಿಮಾ. ಯೋಗರಾಜ ಭಟ್ಟರ ಈ ಸಿನಿಮಾ ಸಹ ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಾಯಿಸಿದ ಸಿನಿಮಾ. ಇಂಡಸ್ಟ್ರಿ ಹಿಟ್ ಆದ ಈ ಸಿನಿಮಾ ಮಲ್ಟಿಫ್ಲೆಕ್ಸ್‌ಗಳಲ್ಲಿಯೇ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನವಾಯ್ತು. ಇಷ್ಟು ಸುದೀರ್ಘ ಅವಧಿಗೆ ಮಲ್ಟಿಫ್ಲೆಕ್ಸ್‌ನಲ್ಲಿ ಪ್ರದರ್ಶನಗೊಂಡ ಮತ್ತೊಂದು ಸಿನಿಮಾ ಭಾರತದಲ್ಲಿಲ್ಲ. 'ಡಿಸಿಎಲ್‌ಜೆ' ಸಿನಿಮಾ 16 ವರ್ಷದಿಂದಲೂ ಚಿತ್ರಮಂದಿರದಲ್ಲಿ ಪ್ರದರ್ಶಿತವಾಗುತ್ತಿದೆ ಆದರೆ ಮಲ್ಟಿಫ್ಲೆಕ್ಸ್‌ನಲ್ಲಿ ಅತ್ಯಂತ ಹೆಚ್ಚು ಕಾಲ ಓಡಿದ ಸಿನಿಮಾ ಮುಂಗಾರು ಮಳೆ. 50 ಕೋಟಿಗೂ ಹೆಚ್ಚು ಹಣ ಗಳಿಸಿದ ಮೊದಲ ಕನ್ನಡ ಸಿನಿಮಾ 'ಮುಂಗಾರು ಮಳೆ'. ವಿದೇಶಗಳಲ್ಲಿಯೂ ಈ ಸಿನಿಮಾ ಬಹಳದ ದೊಡ್ಡ ಹಿಟ್ ಆಯಿತು.

    English summary
    Kannada movie industry: Here are some interesting records created by Kannada movies and Kannada movie makers.
    Friday, August 6, 2021, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X