ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ 83 ಚಿತ್ರ ಖ್ಯಾತ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಜೀವನಾಧಾರಿತವಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದರೆ, ದೀಪಿಕಾ ಪಡುಕೋಣೆ ಕಪಿಲ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.
2011 ರ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿರುವ ಭಾರತದ 1980ರ ನಂತರದ ತಲೆಮಾರಿಗೆ, 1983ರ ವಿಶ್ವಕಪ್ ಏಕೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ಎಂಬುದು ತಿಳಿಯದು. ಕೇವಲ ಒಂದೇ ಒಂದು ವಿಶ್ವಕಪ್ ಮ್ಯಾಚ್ ಗೆದ್ದಿದ್ದ ತಂಡವೊಂದು ದೈತ್ಯ ತಂಡಗಳಿಗೆ ಸೆಡ್ಡು ಹೊಡೆದು ವಿಶ್ವಕಪ್ ಗೆದ್ದು ಬಂದ ರೋಚಕ ಕತೆಯದು. ಈ ಅದ್ಭುತ ಕತೆಗೆ ಭಾವುಕತೆಯ ಲೇಪ ಹೊದಿಸಿ ಸುಂದರವಾಗಿ ಕಟ್ಟಿಕೊಟ್ಟಿದೆ '83' ಸಿನಿಮಾ.