ಬೆಂಕಿಪಟ್ನ ಕಥೆ

  ಬೆಂಕಿಪಟ್ನ ಚಿತ್ರದಲ್ಲಿ ಪ್ರತಾಪ್ ನಾರಾಯಣ್ ನಾಯಕನಾಗಿ ಮತ್ತು ಅನುಶ್ರೀ ನಾಯಕಿಯಾಗಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಅರುಣ್ ಸಾಗರ್, ಜಹಾಂಗೀರ್, ಪ್ರಕಾಶ್ ಬೆಳೆವಡಿ, ಮಂಜು ಗೌಡ, ಶ್ವೇತಾ ಶ್ರೀನಿವಾಸ್, ಹೊನ್ನವಳ್ಳಿ ಕೃಷ್ಣ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

  ಟಿ.ಕೆ. ದಯಾನಂದ ಅವರ ನಿರ್ದೇಶನದಲ್ಲಿ ಮತ್ತು ಕೌಶಿಕ್, ಸ್ಟೀವ್, ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

  ಕಥೆ:

  ಪ್ರೀತಿಸಿದ ಹುಡುಗನೊಂದಿಗೆ ಯುವತಿಯೊಬ್ಬಳು ಓಡಿ ಬಂದು 'ಬೆಂಕಿಪಟ್ಣ' ಅನ್ನುವ ಪುಟ್ಟ ಹಳ್ಳಿಗೆ ಸೇರುತ್ತಾಳೆ. ದುರಾದೃಷ್ಟವಶಾತ್ ಆಕೆ ಗರ್ಭಿಣಿಯಾಗಿರುವಾಗಲೇ ಗಂಡ ತೀರಿಕೊಳ್ಳುತ್ತಾನೆ. ಕಷ್ಟ ಪಟ್ಟು ಮಗನನ್ನ ಸಾಕುವ ತಾಯಿ ಮುಂದೊಂದು ದಿನ ಕೊನೆಯುಸಿರೆಳೆಯುತ್ತಾಳೆ.

  ಹುಟ್ಟುವ ಮುನ್ನವೇ ತಂದೆಯನ್ನ ಕಳೆದುಕೊಂಡಿರುವ ಸೆಂಟ್ ಹನುಮಂತನಿಗೆ (ಪ್ರತಾಪ್ ನಾರಾಯಣ್) ಸಾವು ಅಂದ್ರೇನು ಅನ್ನೋದೇ ಗೊತ್ತಿಲ್ಲದಷ್ಟು ಮುಗ್ಧತೆ. ಫೋಟೋ ಆಸೆಗಾಗಿ ಪೊಲೀಸ್ ಸ್ಟೇಷನ್ ನಲ್ಲಿ ಸ್ಲೇಟ್ ಹಿಡಿದು ನಿಲ್ಲುವ ಹನುಮಂತ, ಸಂಬಳಕ್ಕೋಸ್ಕರ ಇನ್ನೊಬ್ಬರ ಪಿತೂರಿಗೆ ಬಲಿಯಾಗಿ ಜೈಲುಪಾಲಾಗುತ್ತಾನೆ.

  'ಹೆಣ್ಮಕ್ಕಳಿಗೆ ಎರಡು ಗುಂಡಿಗೆ ಇದೆ' ಅಂತ ಎದೆ ಉಬ್ಬರಿಸಿ ಎಂಟ್ರಿಕೊಡುವ ಪಾನಿ (ಅನುಶ್ರೀ) ಅಪ್ಪಟ ಸುದೀಪ್ ಭಕ್ತೆ. ಗಂಡು ಮಕ್ಕಳಿಗೆ ಚಾಲೆಂಜ್ ಹಾಕಿ ನಿಲ್ಲುವ ಪಾನಿ, ತಾನು ಕೆಲಸ ಮಾಡುವ ಮಳಿಗೆಯ ಮೇಸ್ತ್ರಿಯೊಟ್ಟಿಗೆ ದ್ವೇಷ ಕಟ್ಟಿಕೊಳ್ಳುತ್ತಾಳೆ.

  ಇಬ್ಬರ ಮಧ್ಯೆ ಇಲಿ ಪಾಶಾಣ ಕೊಡುವ ತಲೆಪುರುಕ (ಅರುಣ್ ಸಾಗರ್), ತಮಾಷೆ (ಜಹಾಂಗೀರ್) ಅವರ ಅಲ್ಪ ಸ್ವಲ್ಪ ತಮಾಷೆ ಇದೆ. 'ಬೆಂಕಿಪಟ್ಣ'ದಲ್ಲಿ ನಡೆಯುವ ರಾಜಕೀಯ ಪಿತೂರಿಯಿಂದ ಜನಸಾಮಾನ್ಯರು ಹೇಗೆ ಬಲಿಯಾಗುತ್ತಾರೆ ಅನ್ನುವುದು ಬಾಕಿ ಕಥೆ.

  ಸೆಂಟ್ ಹನುಮಂತನಾಗಿ ಪ್ರತಾಪ್ ನಾರಾಯಣ್ ಮುಗ್ಧ ಅಭಿನಯ ನೀಡಿದ್ದಾರೆ. ಹೊಡೆದಾಟದ ದೃಶ್ಯಗಳಲ್ಲಿ ಪ್ರತಾಪ್ ಲೀಲಾಜಾಲ. ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿರುವ ಅನುಶ್ರೀ ಅವರದ್ದು ಕೊಂಚ ಅಬ್ಬರದ ನಟನೆ. ಉಳಿದಂತೆ ಪ್ರೇಕ್ಷಕರನ್ನ ನಗಿಸುವುದರೊಂದಿಗೆ, ಕಣ್ಣಲ್ಲಿ ನೀರು ತರಿಸುವುದು ಅರುಣ್ ಸಾಗರ್ ಮಾತ್ರ. ಜಹಾಂಗೀರ್, ಹೊನ್ನವಳ್ಳಿ ಕೃಷ್ಣ ಕಾಮಿಡಿ ಅಚ್ಚುಕಟ್ಟಾಗಿದೆ.

  'ಬೆಂಕಿಪಟ್ಣ' ಅನ್ನುವ ಊರು. ಒಂದು ಕುಟುಂಬ. ಎರಡು ಬಣ. ಇಷ್ಟರೊಳಗೆ ಕಥೆ ಸಾಗುವುದರಿಂದ ಇಡೀ ಸಿನಿಮಾ ಕುಂಟುತ್ತದೆ. ಅಲ್ಲಲ್ಲಿ ಬಿಡಿಬಿಡಿಯಾಗಿ ಕಥೆ ಹೇಳಿರುವ ಕಾರಣ, ಚಿತ್ರದ ಓಟಕ್ಕೆ ಆಗಾಗ ಬ್ರೇಕ್ ಬೀಳುತ್ತದೆ. ಸಿನಿಮಾ ಮುಗೀತು ಅನ್ನುವ ಹೊತ್ತಿಗೆ ಕ್ಲೈಮ್ಯಾಕ್ಸ್ ನಲ್ಲಿ ಮತ್ತೊಂದು ಫೈಟ್ ಇಟ್ಟಿರುವುದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ.

  ಕಡು ಬಡತನದಲ್ಲಿರುವ ಕುಟುಂಬಗಳು ಪಡುವ ಕಷ್ಟ, ಒಳಗಾಗುವ ಶೋಷಣೆಯನ್ನ 'ಬೆಂಕಿಪಟ್ಣ' ಚಿತ್ರದಲ್ಲಿ ತೋರಿಸಲಾಗಿದೆ. ಆದ್ರೆ, ನಿರ್ದೇಶಕರ ಆಶಯ, ಸಮಾಜಕ್ಕೆ ತಲುಪಬೇಕಾದ ಸಂದೇಶ ಚಿತ್ರದಲ್ಲಿ ಕ್ಲಿಯರ್ ಆಗಿಲ್ಲ. ಚಿತ್ರಮಂದಿರದಿಂದ ಹೊರಬಂದ ಮೇಲೆ 'ಬೆಂಕಿಪಟ್ಣ' ಕಾಡುವುದಿಲ್ಲ. ಪ್ರಯೋಗಾತ್ಮಕ ಚಿತ್ರಗಳನ್ನ ಇಷ್ಟಪಡುವವರು 'ಬೆಂಕಿಪಟ್ಣ' ಚಿತ್ರವನ್ನ ಒಮ್ಮೆ ನೋಡಬಹುದು.

  **Note:Hey! Would you like to share the story of the movie ಬೆಂಕಿಪಟ್ನ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X