ಡಾಲಿ ಧನಂಜಯ್ ನಟನೆಯ 25ನೇ ಚಿತ್ರ ಗುರುದೇವ್ ಹೊಯ್ಸಳ. ಈ ಚಿತ್ರವನ್ನು ವಿಜಯ್ ಎನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ಮಯೂರಿ ನಟರಾಜ್, ನವೀನ ಶಂಕರ್ ಮುಂತಾದವರು ನಟಿಸಿದ್ದಾರೆ.
ಕಥೆ: ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಭಾರ್ಗವ್ ಕಾಣೆಯಾಗಿರುತ್ತಾರೆ. ಅದರ ತನಿಖೆಗೆ ಅಂತ ಹೊರಡುವ ಹೊಯ್ಸಳನಿಗೆ ಹಲವು ಸವಾಲು ಎದುರಾಗುತ್ತೆ. ಭಾರ್ಗವ್ ಎಲ್ಲಿ ಅಂತ ಹುಡುಕೋಕೆ ಹೋದ ಹೊಯ್ಸಳ ಯುವ ಪ್ರೇಮಿಗಳನ್ನು ಒಂದು ಮಾಡುತ್ತಾನೆ. ಅಲ್ಲಿಂದ ಕಥೆ ಆ ಯುವ ಪ್ರೇಮಿಗಳನ್ನು ಸುತ್ತಿಕೊಂಡು, ಮತ್ತೆ ಭಾರ್ಗವನ ಬಳಿ ಬಂದು ನಿಲ್ಲುತ್ತೆ. ಪೊಲೀಸ್ ಅಧಿಕಾರಿ ಭಾರ್ಗವನನ್ನು ಹುಡುಕೋಕೆ ಹೋದ ಗುರುದೇವ್ ಹೊಯ್ಸಳ ಮರ್ಯಾದಾ ಹತ್ಯೆ ಕೇಸ್‌ನಲ್ಲಿ ಸಿಕ್ಕಿಕೊಳ್ಳುತ್ತಾನೆ. ಕೊನೆಗೆ ಅದನ್ನು ಧೈರ್ಯದಿಂದ ಚಾಣಾಕ್ಷ್ಯ ತನದಿಂದ ಹೇಗೆ ಮೆಟ್ಟಿ ನಿಲ್ಲುತ್ತಾನೆ ಅನ್ನೋದು ಕಥೆ.
ಟೈಟಲ್ ವಿವಾದ: ಡಾಲಿ ಧನಂಜಯ್ ಅಭಿನಯದ 25ನೇ ಸಿನಿಮಾ 'ಹೊಯ್ಸಳ' ಟೈಟಲ್ ವಿವಾದದಕ್ಕೆ ಗುರಿಯಾಗಿತ್ತು. ಹೊಯ್ಸಳ ಹೆಸರಿನಲ್ಲೇ ಮೂರು ಸಿನಿಮಾಗಳು ನಿರ್ಮಾಣವಾಗಿರುವುದು ಸಮಸ್ಯೆಗೆ ಕಾರಣವಾಗಿತ್ತು. ಅಖಿಲ ಕರ್ನಾಟಕ ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷರಾಗಿರುವ ಮೂರ್ತಿ ಎಂಬುವವರು 'ಹೊಯ್ಸಳ' ಹೆಸರಿನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದರು. ಜೊತೆಗೆ ಈ ಚಿತ್ರದಲ್ಲಿ ತಾವೇ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್ ಕೂಡ ಆಗಿತ್ತು. ಇನ್ನು ಹೊಯ್ಸಳ ಹೆಸರಿನಲ್ಲೇ ಅಭಯ್ ವೀರ್ ಎಂಬುವವರು ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಧನಂಜಯ್ ಸಿನಿಮಾ ಕೂಡ ಹೊಯ್ಸಳ ಹೆಸರಿನಲ್ಲೇ ನಿರ್ಮಾಣವಾಗಿರುವುದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಒಂದೇ ಟೈಟಲ್‌ನಲ್ಲಿ ಮೂರು ಸಿನಿಮಾ ನಿರ್ಮಾಣವಾಗಿದ್ದರಿಂದ ಧನಂಜಯ್ ಸಿನಿಮಾವನ್ನು 'ಗುರುದೇವ್ ಹೊಯ್ಸಳ' ಎಂದು ಬದಲಿಸಲಾಗಿದೆ.
ಬಿಡುಗಡೆ: ಗುರುದೇವ್ ಹೊಯ್ಸಳ ಸಿನಿಮಾ ಮಾರ್ಚ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.