ಕಿಸ್ಮತ್ ಅಂದ್ರೆ ಅದೃಷ್ಟ. ಈ ಅದೃಷ್ಟ ಹೇಳಿ ಕೇಳಿ ಬರಲ್ಲ. ಆದ್ರೆ, ಕೈಯಲ್ಲಿದ್ದ ಅದೃಷ್ಟ ದೂರ ಆದಾಗ ಆಗುವ ನೋವು ಹೇಳುವುದೇ ಬೇಡ. ಕಿಸ್ಮತ್ ಚಿತ್ರವೂ ಹಾಗೆ, ಅದೃಷ್ಟ ಮೇಲೆ ನಡೆಯುತ್ತೆ. ಎಲ್ಲಾ ಆರಾಮಾಗಿದ್ದ ನಾಯಕನ (ವಿಜಯ್) ಬಾಳಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿಯೊಂದು ಬೀಸುತ್ತೆ. ಈ ಬಿರುಗಾಳಿಗೆ ನಾಯಕ ಹೇಗೆಲ್ಲಾ ಒದ್ದಾಡುತ್ತಾನೆ, ಅದರಿಂದ ಹೇಗೆ ಹೊರಬರ್ತಾನೆ ಎಂಬುದು ಸಿನಿಮಾ.
ಕೈಯಲ್ಲಿದ್ದ ಕೆಲಸ ಕಳೆದುಕೊಳ್ಳುವ ನಾಯಕ, ತಂಗಿ ಮದುವೆಗಾಗಿ ರಾಕ್ಷಸ ರೂಪದ ಬಡ್ಡಿ ಭದ್ರನ ಬಳಿ ಬಡ್ಡಿಗೆ ಸಾಲ ಪಡೀತಾನೆ. ಸಾಲ ತೀರಿಸಲು ನಾಲ್ಕು ತಿಂಗಳು ಡೆಡ್ಲೈನ್ ಇರುತ್ತೆ. ಕೆಲಸವಿಲ್ಲದ ವಿಜಯ್ ಗೆ ಪ್ರೀತಿಸಿದ ಹುಡುಗಿಯನ್ನ (ಸಂಗೀತಾ ಭಟ್) ಮದುವೆಯಾಗಲು ಅವರ ತಂದೆ ಅಡ್ಡಗಾಲು. ಈ ಕಡೆ ಕೆಲಸನೂ ಸಿಗಲ್ಲ, ದುಡ್ಡ ಸಾಲು ವಾಪಸ್ ಕೊಡೋಕು ಆಗಲ್ಲ. ಪ್ರೀತಿಸಿದ ಹುಡುಗಿಯ ತಂದೆಯನ್ನ ಒಪ್ಪಿಸುವುದಕ್ಕೂ ಆಗಲ್ಲ. ಡೆಡ್ ಲೈನ್ ಬೇರೆ ಮುಗಿತು.ಈ ಸುಳಿಯಿಂದ ನಾಯಕ ಹೇಗೆ ಪಾರಾಗಿ ಬರುತ್ತಾನೆ ಎನ್ನುವುದೇ ಚಿತ್ರದ ಕಥೆ.