ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಸೂಜಿದಾರ ಚಿತ್ರವನ್ನು ಮೌನೇಶ್ ಬಡಿಗೇರ್ ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಪ್ರತಿಭೆ ಯಶ್ವಂತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಲೇಖಕ `ಇಂದ್ರಕುಮಾರ್'ರವರ ಸಣ್ಣಕಥೆಗಳ ಆಧಾರದ ಮೇಲೆ ಚಿತ್ರಕಥೆ ರಚಿತವಾಗಿದೆ.
ಚಿತ್ರದ ಕಥೆ ಚಿತ್ರದುರ್ಗದ ಒಂದು ಕಾಲೋನಿಯಲ್ಲಿ ಸಾಗುತ್ತದೆ. ಒಬ್ಬ ತಾನು ಮಾಡದ ಆರೋಪದಲ್ಲಿ ಆರೋಪಿಯಾಗಿ ತನ್ನ ಊರಿನಿಂದ ಓಡಿ ಬಂದು ಈ ಕಾಲೋನಿಯ ಪದ್ಮಾ ಎಂಬ ಮಹಿಳೆಯ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಪದ್ಮಾಳ ಹಿನ್ನಲೆ ಏನು? ಪದ್ಮಾಳ ಹಿಂದಿನ ಬದುಕಿಗೂ ಈ ಯುವಕನಿಗೂ ಏನು ಸಂಬಂಧ?
ಇದೇ ಕಾಲೋನಿಯಲ್ಲಿ ಒಬ್ಬ ಯುವತಿ ತಾನು ಕಿರುತೆರೆ ಲೋಕದಲ್ಲಿ ಮಿನುಗಬೇಕೇಂದು ಪ್ರಯತ್ನ ಪಡುತ್ತಿದ್ದರೆ, ಮತ್ತೊಬ್ಬಳು ಒಂದು ಬೇಡದ ಬಂಧನದಲ್ಲಿ ನರಳುತ್ತಿರುತ್ತಾಳೆ. ಇವರೆಲ್ಲರ ಬದುಕು ಹೇಗೆ ಪರಸ್ಪರ ಹೆಣೆದುಕೊಂಡಿದೆ ಎಂಬುದನ್ನು ಚಿತ್ರ ತೋರಿಸುತ್ತದೆ.ಚಿತ್ರದ ಹಿನ್ನಲೆಯಾಗಿ ಆಗಾಗ ಕೆಲವು ರಾಮಾಯಣ ನಾಟಕ ದೃಶ್ಯಗಳು ಕಾಣಿಸಿಕೊಳ್ಳುತ್ತವೆ.
ಅಭಿಜಿತ್ ಕೋಟೆಗಾರ್ ಮತ್ತು ಸಚ್ಚೀಂದ್ರನಾಥ್ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. `ಮೈಮನ ಪೋಣಿಸೋ ಸೂಜಿದಾರ' ಎಂಬ ಅಡಿಬರಹದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.ಕಾಲವೆಂಬ ಕೊನೆಯಿಲ್ಲದ ದಾರ ನಮ್ಮನೆಲ್ಲ ನೇಯುತ್ತಿದೆ ಎಂಬ ಸಂದೇಶ ಹೊತ್ತು ಚಿತ್ರ ಬರುತ್ತಿದೆ.