»   »  ಗಾಂಧಿ ಮೇಲೆ ಕೋಟಿಗಟ್ಟಲೆ ಹಣ ಸುರಿದ ಬನ್ಸಾಲಿ

ಗಾಂಧಿ ಮೇಲೆ ಕೋಟಿಗಟ್ಟಲೆ ಹಣ ಸುರಿದ ಬನ್ಸಾಲಿ

By: * ಮಲೆನಾಡಿಗ
Subscribe to Filmibeat Kannada
Sanjay Leela Bhansali
ಬೆನ್ ಕಿಂಗ್ಸ್ಲೆ 'ಮಹಾತ್ಮ ಗಾಂಧಿ ' ಪಾತ್ರಮಾಡಿ, ವಿಶ್ವದಾದ್ಯಂತ ಮನೆ ಮಾತಾಗಿದ್ದು ಹಳೆ ಸುದ್ದಿ. ಈಗ ಬಾಲಿವುಡ್ ನಲ್ಲಿ ಇನ್ನೊಬ್ಬ ಗಾಂಧಿ ಸುದ್ದಿಯಲ್ಲಿದ್ದಾರೆ. ಈ ಗಾಂಧಿ ಕುರಿತಾದ ಚಿತ್ರಕ್ಕೆ ಕೋಟಿಗಟ್ಟಲೆ ಹಣ ಸುರಿಯುತ್ತಿದ್ದಾರೆ ದೇವದಾಸ್, ಹಮ್ ದಿಲ್ ದೇ ಚುಕೆ ಸನಮ್, ಬ್ಲ್ಯಾಕ್ ನಂತಹ ಕಲಾಪೂರ್ಣ ಚಿತ್ರಗಳನ್ನು ನೀಡಿದ ಸಂಜಯ್ ಲೀಲಾ ಬನ್ಸಾಲಿ.

ಸಣ್ಣ ಬಜೆಟ್ ಚಿತ್ರಗಳೊಂದಿಗೆ ಬಾಲಿವುಡ್ ಗೆ ಕಾಲಿಟ್ಟ ಬನ್ಸಾಲಿ, ತನ್ನದೇ ಆದ ಶೈಲಿ, ಹೊಸ ತಂಡದೊಡನೆ ಬಾಲಿವುಡ್ ನಲ್ಲಿ ಕಾವ್ಯಾತ್ಮಕವಾದ, ಸಂಗೀತಮಯ ಚಿತ್ರಗಳನ್ನು ನೀಡಿ ಯಶಸ್ವಿ ಆದವರು. ಬರಹಗಾರರಾಗಿ , ಸಹಾಯಕರಾಗಿ ಪರಿಂದಾ, 1942 ಎ ಲವ್ ಸ್ಟೋರಿ, ಖರೀಬ್ ಚಿತ್ರಗಳಲ್ಲಿ ವಿದು ವಿನೋದ್ ಚೋಪ್ರಾಗೆ ಆಪ್ತವಾಗಿದ್ದ ಬನ್ಸಾಲಿ ನಂತರ ಮೊದಲು ನಿರ್ದೇಶಿಸಿದ್ದು, ' ಖಾಮೋಷಿ' ಚಿತ್ರ.

ಆ ಚಿತ್ರದಲ್ಲಿನ ಮೂಕವೇದನೆ , ಸಂಗೀತದ ಲಯ ತಾಳಕ್ಕೆ ಕುಣಿದು ನಲಿಯದವರು ವಿರಳ. ಇಸ್ಮಾಯಿಲ್ ದರ್ಬಾರ್ ರಂತಹ ಉತ್ತಮ ಸಂಗೀತ ನಿರ್ದೇಶಕ, ಶ್ರೇಯಾ ಘೋಷಾಲ್ ರಂತಹ ಅದ್ಭುತ ಗಾಯಕಿಯನ್ನು ಪರಿಚಯಿಸಿದ ಬನ್ಸಾಲಿ, ಈ ಬಾರಿ ಗಡಿನಾಡಿನ ಗಾಂಧಿ ಎಂದು ಖ್ಯಾತರಾದ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಕುರಿತು ಚಿತ್ರ ನಿರ್ಮಿಸುತ್ತಿದ್ದಾರೆ.ಈ ಮುಂಚೆ ನಿರ್ಮಿಸಿದ ಹಮ್ ದಿಲ್ ದೆ ಚುಕೆ ಸನಮ್, ಬ್ಲ್ಯಾಕ್ ಯಶಸ್ಸು ಕೀರ್ತಿ ತಂದು ಕೊಟ್ಟರೂ, ಸಾವರೀಯಾ ಇನ್ನಿಲ್ಲದಂತೆ ನೆಲಕಚ್ಚಿತ್ತು.

ಹಮ್ ದಿಲ್ ದೇ ಚುಕೇ ಸನಮ್, ದೇವದಾಸ್ ಚಿತ್ರಗಳ ಅದ್ಭುತ ಸೆಟ್, ವಸ್ತ್ರವಿನ್ಯಾಸ ಎಲ್ಲರ ಮನಸೂರೆಗೊಂಡಿತ್ತು. ಆದರೆ, ಈ ಬಾರಿ ಗಡಿನಾಡಿನ ಗಾಂಧಿ ಜೀವನಗಾಥೆ ಕುರಿತಾದ 'ಚೆನಾಬ್ ಗಾಂಧಿ' ಚಿತ್ರದ ಮೇಲೆ ಸುಮಾರು 35 ಕೋಟಿ ಬಂಡವಾಳ ಹೂಡುತ್ತಿರುವುದು ಬಾಲಿವುಡ್ ನಲ್ಲಿ ಎಲ್ಲರಿಗೂ ಅಚ್ಚರಿ ತರಿಸಿದೆ. ಈಗಿನ ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಭಾಗದಲ್ಲಿ ಕಥೆ ಕೇಂದ್ರಿಕೃತವಾಗಿದ್ದು, ಚಿತ್ರವನ್ನು ಬನ್ಸಾಲಿಯ ಬಹುಕಾಲದ ಸಹಾಯಕ ವಿಭು ಪುರಿ ನಿರ್ದೇಶಿಸುತ್ತಿರುವುದು ವಿಶೇಷ.

ಅಚ್ಚರಿಯೆಂಬಂತೆ ಈ ಚಿತ್ರದ ತಾರಾಗಣದಲ್ಲಿ ಬನ್ಸಾಲಿಯ ನೆಚ್ಚಿನ ನಟ  ಸಲ್ಮಾನ್ ಗೆ ಕೊಕ್ ನೀಡಲಾಗಿದೆ. ಬಿಗ್ ಬಿ ಅಮಿತಾಬ್ , ಜಾನ್ ಅಬ್ರಹಾಂ ಅಥವಾ ಹರ್ಮನ್ ಬವೇಜಾ ಹಾಗೂ ವಿದ್ಯಾಬಾಲನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಚ್ಚುಕಟ್ಟಾದ ಚಿತ್ರಕಥೆ, ಅದ್ಭುತ ಸಂಗೀತ ಉಳ್ಳ ಚಿತ್ರವನ್ನು ಬನ್ಸಾಲಿ ನೀಡುತ್ತಾರೆ ಎಂಬ ನಂಬಿಕೆ ಎಲ್ಲರಲ್ಲಿದ್ದರೂ, ಈ ಚಿತ್ರ ಇಷ್ಟೊಂದು ಹಣ ಹೂಡಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಚಿತ್ರದ ನಂತರ ನಿರ್ದೇಶನಕ್ಕೆ ಮರಳುತ್ತಿದ್ದು ಹೃತಿಕ್ ರೋಷನ್, ಐಶ್ವರ್ಯ ರೈ ಬಚ್ಚನ್ ಅವರ ತಾರಾಗಣವಿರುವ 'ಗುಜಾರಿಷ್' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada