»   » ಜಯಾಬಚ್ಚನ್ ಕ್ಷಮೆ ಒಲ್ಲೆ ಎಂದ ಎಂಎಸ್ ಎನ್

ಜಯಾಬಚ್ಚನ್ ಕ್ಷಮೆ ಒಲ್ಲೆ ಎಂದ ಎಂಎಸ್ ಎನ್

Posted By:
Subscribe to Filmibeat Kannada

ಮುಂಬೈ, ಸೆ. 9 : ''ತಿಳಿದೋ ತಿಳಿಯದೆಯೋ ನಾನಾಡಿರುವ ಮಾತಿನಿಂದ ಮರಾಠಿ ಜನತೆಗೆ ನೋವಾಗಿದ್ದರೆ ದಯವಿಟ್ಟು  ಕ್ಷಮಿಸಿ'' ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಮರಾಠಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಾನಾಡಿರುವ ಮಾತಿನಲ್ಲಿ ಇನ್ನೊಬ್ಬರ ಮನಸ್ಸು ನೋಯಿಸುವ ಹಾಗೂ ಭಾವನೆಗಳಿಗೆ ಧಕ್ಕೆ ತರುವ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ ವಾರ ಅಭಿಷೇಕ್ ಬಚ್ಚನ್ ನಟಿಸಿರುವ 'ದ್ರೋಣ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ''ನಾವು ಮೂಲತಃ ಮಹಾರಾಷ್ಟ್ರದವರಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಮರಾಠಿ ಭಾಷೆಯಲ್ಲದೆ ಹಿಂದಿ ಮಾತನಾಡುತ್ತೇವೆ'' ಎಂದು ಜಯಾ ಬಚ್ಚನ್ ಹೇಳಿಕೆ ಕೊಟ್ಟು ಮರಾಠಿಗರಿಗೆ ನೋವುಂಟು ಮಾಡಿದ್ದರು. ಇದನ್ನು ವಿರೋಧಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಅಮಿತಾಭ್ ಸೇರಿದಂತೆ ಅವರ ಕುಟುಂಬ ಸದಸ್ಯರಾದ ಜಯಾ ಬಚ್ಚನ್, ಅಭಿಷೇಕ ಬಚ್ಚನ್ ಹಾಗೂ ಐಶ್ವರ್ಯ ರೈ ನಟಿಸಿರುವ  ಯಾವುದೇ ಚಿತ್ರ ಹಾಗೂ ಜಾಹೀರಾತುಗಳ ಪ್ರದರ್ಶನವನ್ನು ಮಾಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು.

ಬದಲಾದ ಜಯಾಬಚ್ಚನ್ ವರಸೆ
''ಮರಾಠಿ ಭಾಷೆ ಮತ್ತು ಭಾಷಿಕರ ಮೇಲೆ ಅಪಾರ ಅಭಿಮಾನ ಹೊಂದಿದ್ದೇನೆ.ಅಷ್ಟೇ ಅಲ್ಲ ನನ್ನ ಕುಟುಂಬ ಎಲ್ಲ ಸದಸ್ಯರು ಮರಾಠಿಯನ್ನು ಚೆನ್ನಾಗಿ ಮಾತನಾಡುತ್ತಾರೆ. ನನ್ನ ಜೀವನದ ಕೊನೆಯ ಉಸಿರಿರುವವರೆಗೂ ಮಾರಾಠಿ ನೆಲದಲ್ಲೇ ಜೀವನ ನಡೆಸುತ್ತೇನೆ'' ಎಂದು ಜಯಾಬಚ್ಚನ್ ತಮ್ಮ ಡೈಲಾಗನ್ನು ಕೊಂಚ ಬದಲಾಯಿಸಿ ಮರಾಠಿಗರ ಕ್ಷಮೆ ಯಾಚಿಸಿದ್ದಾರೆ. ಆದರೆ  ಜಯಾ ಬಚ್ಚನ್ ಈ ರೀತಿ  ಕ್ಷಮೆಯಾಚಿಸಿರುವುದನ್ನು ಎಂಎನ್ಎಸ್ ಸುತಾರಾಂ ಒಪ್ಪುತ್ತಿಲ್ಲ. ಕೆಲ ಮರಾಠಿ ಪತ್ರಿಕೆಗಳ ಮೂಲಕ ಬಹಿರಂಗವಾಗಿ ಮರಾಠಿಗರ ಕ್ಷಮೆ ಕೇಳಬೇಕು ಎಂದು ಪಟ್ಟುಹಿಡಿದಿವೆ.  

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada