For Quick Alerts
  ALLOW NOTIFICATIONS  
  For Daily Alerts

  ಗಬ್ಬರ್ ಸಿಂಗ್ ನೆಚ್ಚಿನ ಬಂಟ ಸಾಂಭಾ ಇನ್ನು ಬರಿ ನೆನಪು

  By Rajendra
  |

  ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಶೋಲೆ' (1975)ಚಿತ್ರದ ಗಬ್ಬರ್ ಸಿಂಗ್ ನ ನೆಚ್ಚಿನ ಬಂಟ ಸಾಂಭಾ(71) ಇನ್ನಿಲ್ಲ. ಅವರ ನಿಜವಾದ ಹೆಸರು ಮ್ಯಾಕ್ ಮೋಹನ್. ಶೋಲೆ ಚಿತ್ರದ ಸಾಂಭಾ ಪಾತ್ರದಿಂದ ಮೋಹನ್ ಜನಪ್ರಿಯರಾಗಿದ್ದರು. ಸುದೀರ್ಘ ಕಾಲದಿಂದ ಪುಪ್ಪಸ ಕ್ಯಾನ್ಸರ್ ನಿಂದ ಅವರು ಬಳಲುತ್ತಿದ್ದರು. ಮುಂಬೈ ಅಂಧೇರಿಯ ಕೋಕಿಲಾಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಸೋಮವಾರ ಅವರು ಕೊನೆಯುಸಿರೆಳೆದಿದ್ದಾರೆ.

  ಶೋಲೆ ಚಿತ್ರದ "ಅರೇ ಓ ಸಾಂಭಾ ಕಿತನೆ ಆದ್ಮಿ ತೇ" ಎಂಬ ಗಬ್ಬರ್ ಸಿಂಗ್ ನ ಅಬ್ಬರದ ಡೈಲಾಗ್ ಇನ್ನೂ ಚಿತ್ರಪ್ರೇಮಿಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಪ್ರೇಕ್ಷಕರು ಇನ್ನೂ ಆ ಡೈಲಾಗನ್ನು ಮರೆತಿಲ್ಲ. ನೆನ್ನೆ ಮೊನ್ನೆ ಕೇಳಿದಂಗೆ ಇದೆ ಎನ್ನುತ್ತಾರೆ. ಅಷ್ಟೊಂದು ಜನಪ್ರಿಯವಾಗಿತ್ತು ಆ ಡೈಲಾಗ್. ಗಬ್ಬರ್ ಸಿಂಗ್ ಇವರನ್ನು ಕುರಿತೇ ಅರೆ ಓ ಸಾಂಭಾ...ಎನ್ನುತ್ತಿದ್ದರೆ ರಾಮನಗರದ ಶ್ರೀರಾಮದೇವರ ಬೆಟ್ಟ ಪ್ರತಿಧ್ವನಿಸುತ್ತಿತ್ತು.

  ಮ್ಯಾಕ್ ಮೋಹನ್ ಅವರು ಪತ್ನಿ ಮಿನಿ, ಮಗಳು ವಿನತಿ ಹಾಗೂ ಮಗ ವಿಕ್ರಾಂತ್ ಅವರನ್ನು ಅಗಲಿದ್ದಾರೆ. 1964ರಲ್ಲಿ "ಹಕೀಕತ್" ಚಿತ್ರದ ಮೂಲಕ ಬೆಳ್ಳಿತೆರೆಗೆ ಮ್ಯಾಕ್ ಮೋಹನ್ ಅಡಿಯಿಟ್ಟಿದ್ದರು. ತಮ್ಮ 46 ವರ್ಷಗಳ ವೃತ್ತಿಜೀವನದಲ್ಲಿ 175 ಚಿತ್ರಗಳಲ್ಲಿ ನಟಿಸಿದ್ದಾರೆ. ಬಹಳಷ್ಟು ಚಿತ್ರಗಳಲ್ಲಿ ಅವರು ನೆಗಟೀವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

  ಅವರ ಮೂಲ ಹೆಸರು ಮೋಹನ್ ಮಖಿಜಾನಿ. ಚಿತ್ರರಂಗಕ್ಕೆ ಅಡಿಯಿಟ್ಟ ಬಳಿಕ ಅವರ ಹೆಸರು ಮ್ಯಾಕ್ ಮೋಹನ್ ಎಂದಾಗಿತ್ತು. ಮೂಲತಃ ರಂಗಕಲಾವಿದರಾದ ಮೋಹನ್ ನಿರ್ದೇಶಕ ಚೇತನ್ ಆನಂದ್ ಅವರಿಗೆ ಸಹಾಯಕರಾಗಿ ಚಿತ್ರೋದ್ಯಮಕ್ಕೆ ಬಂದಿದ್ದರು. ಮೋಹನ್ ಅಭಿನಯದ ಕಡೆಯ ಚಿತ್ರ "ಲಕ್ ಬೈ ಚಾನ್ಸ್".

  ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಹೊಸ ಶಕೆ ಆರಂಭಿಸಿದ ಚಿತ್ರ 'ಶೋಲೆ'. 70ರ ದಶಕದಲ್ಲಿ ಭಾರತೀಯ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನು ಮುರಿದ ಚಿತ್ರ ಇದಾಗಿತ್ತು. ಅಮಿತಾಬ್ ಬಚ್ಚನ್ ಅವರಿಗೆ ಆಂಗ್ರಿ ಎಂಗ್ ಮ್ಯಾನ್ ಪಟ್ಟ ತಂದುಕೊಟ್ಟಂತಹ ಚಿತ್ರ. ಹೊಸ ಹಾಗೂ ಹಳೆ ತಲೆಮಾರಿನ ಪ್ರೇಕ್ಷರಿಬ್ಬರಿಗೂ ಈ ಚಿತ್ರ ಹಾಟ್ ಫೇವರಿಟ್.

  ಅಮಿತಾಬ್ ಬಚ್ಚನ್ ಮಾತನಾಡುತ್ತಾ, ಮೋಹನ್ ತುಂಬಾ ಮೃದು ಹೃದಯಿ, ಸೌಮ್ಯ ಸ್ವಭಾವದವರು. ಅವರೊಂದಿಗೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಹಲವಾರು ಕಾರಣಗಳಿಂದ ಅವರ ನೆನಪು ಸದಾ ಹಸಿರಾಗಿರುತ್ತದೆ. ಮುಖ್ಯವಾಗಿ ಶೋಲೆ ಚಿತ್ರದ ಸಾಂಭಾ ಪಾತ್ರ ಎಂದಿದ್ದಾರೆ.

  ಶೋಲೆ ಚಿತ್ರದಲ್ಲಿ ರಾಮನಗರದ ಶ್ರೀರಾಮದೇವರ ಬೆಟ್ಟವನ್ನು ಚಂಬಲ್ ಕಣಿವೆಯಾಗಿ ತೋರಿಸಲಾಗಿತ್ತು. ಇದೀಗ ಈ ಬೆಟ್ಟವನ್ನು ಶೋಲೆ ಬೆಟ್ಟವೆಂದೇ ಗುರುತಿಸುತ್ತಾರೆ. ಶೋಲೆ ಚಿತ್ರದ ಬಸಂತಿ ಮನೆ, ಗಬ್ಬರ್ ಸಿಂಗ್ ವಾಸವಾಗಿದ್ದ ಗುಹೆಗಳನ್ನು ನೋಡಲು ಸಾಕಷ್ಟು ಪ್ರವಾಸಿಗಳು ಇಂದಿಗೂ ರಾಮನಗರಕ್ಕೆ ಬರುತ್ತಲೇ ಇದ್ದಾರೆ. ಸಾಂಭಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.

  ವಿಡಿಯೋ: ಶೋಲೆ ಚಿತ್ರದ ಸಾಂಬಾ

  ಜನಪ್ರಿಯ ನಟ ಮ್ಯಾಕ್ ಮೋಹನ್ ಕುರಿತ ಒಂದು ಕವನ

  ಅರೆ ಓ ಸಾಂಬಾ

  "ಅರೆ ಓ ಸಾಂಬಾ, ಕಹ್ಞಾ ಗಯಾರೇ?"
  "ದೂರ್, ಸರ್ಕಾರ್."
  "ಕಿತ್‌ನೀ ದೂರ್?"
  "ಪೂರೇ ಭೂಲೋಕ್ ಪಾರ್."
  "ಕೌನ್ ಹೈ ರೇ ವಹ್ಞಾ?"
  "ಮೇರಾ ಬಾಸ್ ಗಬ್ಬರ್ ಹೈ, ಸರ್ಕಾರ್."
  "ಅಚ್ಛಾ, ಉಧರ್ ಶಾಂತಿ ಸೇ ರಹ್‌ನಾ. ಶೋಲೆ ಮತ್ ಜಲಾನಾ."
  "ಠೀಕ್, ಸರ್ಕಾರ್."

  -ಎಚ್. ಆನಂದರಾಮ ಶಾಸ್ತ್ರೀ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X