»   » ಓಂ ಪುರಿ ಮನೆಗೆ ಕನ್ನ ಹಾಕಿದ ಖತರ್ನಾಕ್ ಕಳ್ಳರು

ಓಂ ಪುರಿ ಮನೆಗೆ ಕನ್ನ ಹಾಕಿದ ಖತರ್ನಾಕ್ ಕಳ್ಳರು

Posted By:
Subscribe to Filmibeat Kannada

ಸಾಕಷ್ಟು ಸಿನಿಮಾಗಳಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ರಫ್ ಅಂಡ್ ಟಫ್ ಪಾತ್ರಗಳಲ್ಲಿ ಮಿಂಚಿದ್ದ ಬಾಲಿವುಡ್ ನಟ ಓಂ ಪುರಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮುಂಬೈನ ಅಂಧೇರಿಯಲ್ಲಿರುವ ಅವರ ಮನೆಗೆ ಕನ್ನ ಹಾಕಿದ ಕಳ್ಳರು ನಗನಾಣ್ಯ ಸೇರಿದಂತೆ ಒಡವೆಗಳ ಸಮೇತ ಪರಾರಿಯಾಗಿದ್ದಾರೆ.

ಕನ್ನಗಳ್ಳರು ಒಟ್ಟು ರು.1.75 ಲಕ್ಷ ದೋಚಿ ಪರಾರಿಯಾಗಿದ್ದಾರೆ. ಶುಕ್ರವಾರ ಮುಂಜಾನೆ ಓಂ ಪುರಿ ಅವರ ಮಗ ಇಶಾನ್ ಮನೆಗೆ ಬಂದಾಗ ನಳಂದ ಬಿಲ್ಡಿಂಗ್ ಫ್ಲಾಟ್ ನಲ್ಲಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓಂ ಪುರಿ ಅವರಿಗೆ ಎರಡು ಮನೆಗಳಿದ್ದು ಈ ಮನೆಯಲ್ಲಿ ಅವರು ವಾಸಿಸುತ್ತಿರಲಿಲ್ಲ ಎನ್ನಲಾಗಿದೆ.

ಕಳ್ಳತನವಾಗಿರುವ ಮನೆಯನ್ನು ಅವರು ಸ್ಟೋರ್ ರೂಂ ಆಗಿ ಬಳಕೆ ಮಾಡುತ್ತಿದ್ದರು. ಒಂದು ಲಕ್ಷ ರೂಪಾಯಿ ನಗದು ಹಾಗೂ ರು.75 ಸಾವಿರ ಚಿನ್ನಾಭರಣ ಕಳುವಾಗಿದೆ ಎಂದು ಓಂ ಪುರಿ ಅವರ ಪತ್ನಿ ತಿಳಿಸಿದ್ದಾರೆ. ಮನೆಯ ಕಿಟಕಿ ಹಾಗೂ ಬಾಗಿಲನ್ನು ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಎಸ್ ನಲವಾಡೆ ತಿಳಿಸಿದ್ದಾರೆ.

ಗುರುವಾರ ರಾತ್ರಿ ಬಾಗಿಲು ಬಡಿತದ ಸದ್ದು ಕೇಳಿದ ನೆರೆಹೊರೆಯವರು ಬಹುಶಃ ಓಂ ಪುರಿ ಅವರೇ ಮನೆಗೆ ಬಂದಿರಬೇಕು ಎಂದುಕೊಂಡು ಸುಮ್ಮನಾಗಿದ್ದರು. ಘಟನೆ ನಡೆದ ಬಳಿಕ ಮನೆಯ ಕಾವಲುಗಾರ ನಾಪತ್ತೆಯಾಗಿದ್ದು ಕೃತ್ಯದಲ್ಲಿ ಮನೆಯ ಕಾವಲುಗಾರ ನೇಪಾಳಿಯ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada