»   »  ಬಾಲಿವುಡ್ ಗೆ ದಾಂಗುಡಿಯಿಟ್ಟ ಹಂದಿಜ್ವರ

ಬಾಲಿವುಡ್ ಗೆ ದಾಂಗುಡಿಯಿಟ್ಟ ಹಂದಿಜ್ವರ

Subscribe to Filmibeat Kannada

ಹಂದಿಜ್ವರಕ್ಕೆ ಬಾಲಿವುಡ್ ಮಂದಿ ಬೆಚ್ಚಿದ್ದಾರೆ. ಹಂದಿಜ್ವರ ಹಿಂದಿ ಚಿತ್ರೋದ್ಯಮ ನಿದ್ದೆಗೆ ಭಂಗ ತಂದಿದೆ. ಹಂದಿ ಜ್ವರದ ಕಾರಣ ಮುಂಬೈ, ಪುಣೆಯಲ್ಲಿನ ಚಿತ್ರಮಂದಿರಗಳನ್ನು ಮುಚ್ಚಬೇಕೆಂದು ಮಹಾರಾಷ್ಟ್ರ ಸರಕಾರ ಆದೇಶಿಸಿದೆ. ಪರಿಣಾಮ ಮುಂಬೈ ಮತ್ತು ಪುಣೆ ಚಿತ್ರಮಂದಿರಗಳು ಬಿಕೋ ಎನ್ನುತ್ತಿವೆ.

ಮೂರು ದಿನಗಳ ಕಾಲ ಚಿತ್ರಮಂದಿರಗಳನ್ನು ಮುಚ್ಚಬೇಕೆಂಬ ಆದೇಶ ಮಹಾರಾಷ್ಟ್ರ ಸರಕಾರದಿಂದ ಹೊರಬಿದ್ದಿದೆ. ಈ ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಗಮನಿಸಿ ಮತ್ತಷ್ಟು ದಿನಗಳ ಕಾಲ ಚಿತ್ರಮಂದಿರಗಳನ್ನು ಮುಚ್ಚುವ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಚಿತ್ರೀಕರಣ ನಿಲ್ಲಿಸುವ ಬಗ್ಗೆಯೂ ಬಾಲಿವುಡ್ ನಿರ್ಮಾಪಕರು ಯೋಚಿಸುತ್ತಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್, ಕರಣ್ ಜೋಹಾರ್(ಕುರ್ಬಾನ್ ಚಿತ್ರ) ತಮ್ಮ ತಮ್ಮ ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಸಲ್ಲು ಅಭಿನಯಿಸುತ್ತಿರುವ 'ವೀರ್' ಚಿತ್ರ ಪುಣೆ ಸುತ್ತಮುತ್ತ ಚಿತ್ರೀಕರಣಗೊಳ್ಳಬೇಕಿತ್ತು.

ವೀರ್ ಚಿತ್ರವನ್ನು ಮೂರು ದಿನಗಳ ಕಾಲ ಪುಣೆ ಸುತ್ತಮುತ್ತ ಚಿತ್ರೀಕರಿಸಲು ಯೋಚಿಸಲಾಗಿತ್ತು. ಆದರೆ ಹಂದಿಜ್ವರದ ಕಾರಣ ತಕ್ಷಣ ಚಿತ್ರೀಕರಣಕ್ಕೆ ತಡೆಹಾಕಲಾಗಿದೆ. ಜ್ವರ ನಿಯಂತ್ರಣಕ್ಕೆ ಬಂದ ನಂತರ ಚಿತ್ರೀಕರಣ ಮುಂದುವರೆಸುವುದಾಗಿ ನಿರ್ದೇಶಕ ಅನಿಲ್ ಶರ್ಮ ತಿಳಿಸಿದ್ದಾರೆ.

ಕರಣ್ ಜೋಹಾರ್ ತಾತ್ಕಾಲಿಕವಾಗಿ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಪ್ರಮುಖ ನಾಯಕ ನಟರ ಮತ್ತಷ್ಟು ಚಿತ್ರಗಳು ನಿಲ್ಲುವ ಸೂಚನೆ ಇದೆ. ಪ್ರಿಯಾಂಕ ಚೋಪ್ರಾ, ಶಾಹಿದ್ ಕಪೂರ್ ನಟನೆಯ 'ಕಮೀನೆ' ಚಿತ್ರ ಆಗಸ್ಟ್ 14ರಂದು ಬಿಡುಗಡೆಯಾಗುತ್ತಿದೆ. ಮುಂಬೈ ಮತ್ತು ಪುಣೆಯಲ್ಲಿ ಆ.17ರಂದು ಈ ಚಿತ್ರ ತೆರೆಕಾಣಲಿದೆ.

ಗೋವಿಂದ ಅಭಿನಯದ 'ಲೈಫ್ ಪಾರ್ಟನರ್' ಸಹ ಆಗಸ್ಟ್ 14ರಂದು ತೆರೆಕಾಣಲಿದೆ. ಈ ಎರಡು ಚಿತ್ರಗಳನ್ನು ಬಿಡುಗಡೆ ಮಾಡುವುದೇ ಬೇಡವೆ ಎಂಬ ಸಂದಿಗ್ದ ಪರಿಸ್ಥಿತಿಯಲ್ಲಿ ನಿರ್ಮಾಪಕರು ಬಿದ್ದಿದ್ದರು. ಮಹಾರಾಷ್ಟ್ರ ಹಾಗೂ ದೆಹಲಿ ಚಿತ್ರಮಂದಿರಗಳ ಬಾಕ್ಸಾಫೀಸ್ ಗಳಿಕೆಗೆ ಭಾರಿ ಹೊಡೆತ ಬಿದ್ದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada