»   »  ಒರಿಸ್ಸಾದ ಹಳ್ಳಿಗಳಲ್ಲಿ ಶಾರುಖ್ ಬೆಳಕಿನ ಕ್ರಾಂತಿ!

ಒರಿಸ್ಸಾದ ಹಳ್ಳಿಗಳಲ್ಲಿ ಶಾರುಖ್ ಬೆಳಕಿನ ಕ್ರಾಂತಿ!

Subscribe to Filmibeat Kannada

'ಸ್ವದೇಸ್ 'ಚಿತ್ರದಲ್ಲಿ ಶಾರುಖ್ ಖಾನ್ ಅವರದು ನಾಸಾದಲ್ಲಿ ಕೆಲಸ ಮಾಡುವ ಅನಿವಾಸಿ ಭಾರತೀಯನ ಪಾತ್ರ. ಆತ ಭಾರತದ ತನ್ನ ಹಳ್ಳಿಗೆ ಹಿಂತಿರುಗಿದಾಗ ಅಲ್ಲಿನ ವಿದ್ಯುತ್ ಸಮಸ್ಯೆಯನ್ನು ಕಂಡು ವಿಚಲಿತನಾಗುತ್ತಾನೆ. ತನ್ನೂರಿನಲ್ಲಿ ಜಲವಿದ್ಯುತ್ ಘಟಕ ಸ್ಥಾಪಿಸುವ ಮೂಲಕ ಹಳ್ಳಿಗೆ ಬೆಳಕಾಗುತ್ತಾನೆ. ಇದು ರೀಲ್ ಕತೆಯಾಯಿತು. ಆದರೆ ರಿಯಲ್ ಲೈಫ್ ನಲ್ಲೂ ಶಾರುಖ್ ಇದೇ ರೀತಿಯ ಸಾಹಸವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ!

ಒರಿಸ್ಸಾದ ಕೇಂದ್ರಪರ ಜಿಲ್ಲೆಯಲ್ಲಿ ಹಲವಾರು ಹಳ್ಳಿಗಳು ಇಂದಿಗೂ ಕತ್ತಲಲ್ಲಿವೆ. ಅಲ್ಲಿ ತೀವ್ರ ವಿದ್ಯುತ್ ಕ್ಷಾಮ. ಇದನ್ನು ಗಮನಿಸಿದ ಶಾರುಖ್ ಆ ಜಿಲ್ಲೆಯ ಕೆಲವೊಂದು ಹಳ್ಳಿಗಳಿಗೆ ಸೌರವಿದ್ಯುತ್ತಿನ ಮೂಲಕ ಮನೆಮನೆಗೆ ಬೆಳಕು ತಂದಿದ್ದಾರೆ. 'ಲೈಟಿಂಗ್ ಬಿಲಿಯನ್ ಲೈವ್ಸ್' ಎಂಬ ಎನ್ ಡಿಟಿವಿಯ ಮಹತ್ವಾಕಾಂಕ್ಷಿ ಯೋಜನೆಗೆ ಹಣ ನೀಡುವ ಮೂಲಕ ಹಲವರ ಬಾಳಿನಲ್ಲಿ ಬೆಳಕಾಗಿದ್ದಾರೆ ಶಾರುಖ್.

ಒರಿಸ್ಸಾದಆರು ಹಳ್ಳಿಗಳಲ್ಲಿ ಈಗ ನಿತ್ಯ ಝಗಮಗಿಸುವ ಬೆಳಕು. ಪ್ರತಿ ಹಳ್ಳಿಗೂ 50 ಸೌರವಿದ್ಯುತ್ ಲಾಟೀನ್ ಗಳನ್ನು ಕೊಡಲಾಗಿದೆ. ಸೌರವಿದ್ಯುತ್ ಪ್ಯಾನೆಲ್ ಗಳ ಮೂಲಕ ಇವುಗಳನ್ನು ರೀಚಾರ್ಜ್ ಮಾಡಿಕೊಂಡು ಮನೆಯ ಮೇಲ್ಚಾವಣೆಗೆ ನೇತು ಹಾಕಿದರೆ ಸಾಕು, ಮನೆತುಂಬ ಬೆಳಕು. ಈ ಯೋಜನೆ ಎಷ್ಟರ ಮಟ್ಟಿಗೆ ಕಾರ್ಯಗತವಾಗಿದೆ ಎಂಬುದನ್ನು ಶಾರುಖ್ ಖುದ್ದು ಬಂದು ನೋಡುವುದಿಲ್ಲ. ಸ್ಥಳೀಯ ಅಧಿಕಾರಿಗಳು ಯೋಜನೆ ಬಗ್ಗೆ ಶಾರುಖ್ ಗೆ ಆಗಾಗ ಸುದ್ದಿಮುಟ್ಟಿಸುತ್ತಿರುತ್ತಾರೆ!

ವಿದ್ಯುತ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಶಾರುಖ್ ಕೈಗೊಂಡ ಈ ಕಾರ್ಯಕ್ರಮಕ್ಕೆ ಎಲ್ಲಕಡೆಯಿಂದಲೂ ಮೆಚ್ಚ್ಚುಗೆ ವ್ಯಕ್ತವಾಗುತ್ತಿದೆ. ಸೌರ ವಿದ್ಯುತ್ ಉಪಕರಣಗಳ ಖರ್ಚು ಅವುಗಳ ಸ್ಥಾಪನೆ ವೆಚ್ಚಗಳನ್ನು ಶಾರುಖ್ ಅವರೇ ಭರಿಸಿದ್ದಾರೆ. ಉಳಿದಂತೆ ಅವುಗಳ ನಿರ್ವಹಣೆಯನ್ನು ಆಯಾ ಗ್ರಾಮಗಳಿಗೆ ಒಪ್ಪಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada