»   » ಅಪ್ರತಿಮ ಸುಂದರಿ ಮಧುಬಾಲಾಗೆ ಅಂಚೆಚೀಟಿ ಗೌರವ

ಅಪ್ರತಿಮ ಸುಂದರಿ ಮಧುಬಾಲಾಗೆ ಅಂಚೆಚೀಟಿ ಗೌರವ

Subscribe to Filmibeat Kannada

ಮುಂಬೈ, ಮಾ. 20 : ಭಾರತೀಯ ಚಿತ್ರರಂಗದ ಮನೋಜ್ಞ ಅಭಿನೇತ್ರಿ ಮಧುಬಾಲ ಅವರಿಗೆ ಗೌರವ ಸೂಚಿಸುವ ಅಂಚೆಚೀಟಿಯನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಲಾಯಿತು. ಹಿಂದಿ ಚಿತ್ರರಂಗದ ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಅನುಪಮ ಸುಂದರಿ ಎಂದರೆ ಬಹುಶಃ ಮಧುಬಾಲ ಮಾತ್ರ ! ಆಕೆಯನ್ನು "ವೀನಸ್ ಆಫ್ ಇಂಡಿಯನ್ ಸ್ಕ್ರೀನ್" ಎಂದೂ ಬಣ್ಣಿಸಲಾಗುತ್ತದೆ. ದಿವ್ಯವಾದ ಸೌಂದರ್ಯ, ಮೋಹಕ ಮುಖಾರವಿಂದವು ಆಕೆಯನ್ನು ತನ್ನ ಸಮಕಾಲೀನ ನಟಿಯರಿಗಿಂತ ಭಿನ್ನವಾಗಿಸಿತ್ತು.

ಮಧುಬಾಲ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದ ಅಂಚೆಚೀಟಿ ಬಿಡುಗಡೆ ಸಮಾರಂಭ ಮಂಗಳವಾರ ಮುಂಬೈನಲ್ಲಿ ನಡೆಯಿತು. ಅಂಚೆಚೀಟಿಯನ್ನು ಬಿಡುಗಡೆ ಮಾಡಿದ ಮನೋಜ್ ಕುಮಾರ್, ಮಧುಬಾಲ ಅವರನ್ನು "ಫೇಸ್ ಆಫ್ ದಿ ಸೆಂಚುರಿ" ಎಂದು ಬಣ್ಣಿಸಿದರು. ಒಂದು ಶತಮಾನದಲ್ಲಿ ಒಬ್ಬಳೇ ಒಬ್ಬಳು ಮಧುಬಾಲ ಬರಲಿಕ್ಕೆ ಸಾಧ್ಯ ಎಂದರು ಮನೋಜ್. ಆಕೆಯ ಜತೆಯಲ್ಲಿ ನಟಿಸುವ ಅವಕಾಶ ಬಂದದ್ದಕ್ಕೆ ತಾವು ಧನ್ಯ ಎಂದೂ ಮನೋಜ್ ಭಾವುಕರಾಗಿ ನುಡಿದರು.

ಅಂಚೆ ಇಲಾಖೆಯು ಮಧುವನ್ನು ಈ ರೀತಿ ಗೌರವಿಸಿರುವುದು ತಮಗೆ ತೀವ್ರ ಸಂತೋಷ ಉಂಟುಮಾಡಿದೆ ಎಂದು ಬಿಡುಗಡೆ ಸಮಾಂರಂಭದಲ್ಲಿ ಪಾಲ್ಗೊಂಡಿದ್ದ ಮಧುಬಾಲ ಸೋದರಿ ಮಧುಭೂಷಣ್ ನುಡಿದರು. ಚಿತ್ರರಂಗದವರರನ್ನು ಸ್ಮರಿಸುವ ಉದ್ದೇಶದ ಅಂಚೆಚೀಟಿ ಬಿಡುಗಡೆ ಭಾರತದಲ್ಲಿ ಆರಂಭವಾದದ್ದು 1971ರಲ್ಲಿ. ಪ್ರಥಮ ಅಂಚೆಚೀಟಿ ಹೊರಬಂದದ್ದು ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಲ್ಲಿ, ಅವರ ಜನ್ಮಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ.

ಅಂಚೆಚೀಟಿ ಗೌರವಕ್ಕೆ ಪಾತ್ರರಾಗುತ್ತಿರುವ ಅನಾರ್ಕರಿಯರಲ್ಲಿ "ಆಜ್ ಕಹೇಂಗೆ ದಿಲ್ ಕಾ ಫಸಾನಾ ಜಾನಭಿ ಲೇಲೆ ಚಾಹೆ ಜಮಾನಾ" ನೆನಪಿಸುವ ಮಧುಬಾಲ ಎರಡನೆಯವರು. ಮೊದಲ ಬಾರಿಗೆ ಆ ಗೌರವ ಪಡೆದವರು ರಾಜ್ ಕಪೂರ್ ನ ಹೃದಯೇಶ್ವರಿ ನರ್ಗಿಸ್. 1942ರಲ್ಲಿ ತೆರೆಕಂಡ "ಬಸಂತ್" ಮಧುಬಾಲಾ ಅವರ ಪ್ರಪ್ರಥಮ ಚಿತ್ರ. 27 ವರ್ಷಗಳ ಕಾಲ ಚಿತ್ರರಂಗದಲ್ಲಿ ಬೆಳಗಿದ ಮಧು ತೀರಿಕೊಂಡದ್ದು 1969ರಲ್ಲಿ. ಆವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಮಹಲ್, ಆಯೇಗಿ ಆನೇವಾಲಾ, ಮೊಘಲ್ ಎ ಆಜಾಮ್, ಸಂಗ್ ದಿಲ್, ಅಮರ್, ನಯಾದೌರ್ , ಫಾಗುನ್, ಬರಸಾತ್ ಕಿ ರಾತ್ ..ಮಧುಬಾಲ ನಟಿಸಿದ ಕೆಲವು ಚಿತ್ರಗಳು.

(ಎಎನ್ಐ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada