»   » ಚೆಲುವಿನ ತುಟಿಗಳ ಕತ್ರಿನಾಳ ಬಾಯಿಂದ ಉದುರಿದ ನುಡಿಮುತ್ತುಗಳು

ಚೆಲುವಿನ ತುಟಿಗಳ ಕತ್ರಿನಾಳ ಬಾಯಿಂದ ಉದುರಿದ ನುಡಿಮುತ್ತುಗಳು

Posted By:
Subscribe to Filmibeat Kannada

ಬೆಂಗಳೂರು, ಅ.19 : ಬಾಲಿವುಡ್ ನಟಿ ಕತ್ರಿನಾ ಕೈಫ್ ಸಿನಿಮಾ ಬಿಡಿ ಜಾಹೀರಾತುಗಳಲ್ಲೇ ಹೆಚ್ಚಾಗಿ ನಟಿಸಿದ್ದು. ಈಗ ಆಕೆ ನಟಿಸಿದ್ದ 'ಪಾರ್ಟ್ನರ್" ಚಿತ್ರ ಒಂಚೂರು ಹೆಸರು ತಂದುಕೊಟ್ಟಿದೆ. ಹಾಗಾಗಿ ಆಕೆಯ ಮಾತಿನ ವರಸೆಗಳು ಬದಲಾಗಿವೆ.

ದೇಹದ ಅನವಶ್ಯಕ ರೋಮಗಳನ್ನು ನಿವಾರಿಸುವ ಜಾಹೀರಾತುಗಳಲ್ಲಿ ಈಕೆ ಕಾಣಿಸಿಕೊಂಡಿದ್ದೆ ಹೆಚ್ಚು. ಹಾಗೆಯೇ ಸಲ್ಲೂ ಜೊತೆಗಿನ ಗುಲ್ಲು ಸುಳ್ಳಲ್ಲ. ಇರಲಿ ಅದೆಲ್ಲಾ ಈಗ್ಯಾಕೆ. ಈಕೆ ನಟಿಸಿರುವ 'ವೆಲ್‌ಕಮ್", 'ರೇಸ್" ಮತ್ತು 'ಮೈ ಯುವರಾಜ್" ಎಂಬ ಚಿತ್ರಗಳು ಬಿಡುಗಡೆಗಾಗಿ ಕಾದಿವೆ. ಇವುಗಳ ಬಗ್ಗೆ ಬಾಲಿವುಡ್‌ನಲ್ಲಿ ಒಳ್ಳೆಯ ಮಾತು ಕೇಳಿಬರುತ್ತಿದೆ. ಹಾಗಾಗಿ ಚೆಲ್ಲು ಚೆಲ್ಲಾಗಿ ಆಡುತ್ತಿದ್ದ ಕತ್ರಿನಾ ಈಗ ಪ್ರಬುದ್ಧ ನಟಿಯಂತೆ ಮಾತನಾಡುತ್ತಾಳೆ.

ಇಷ್ಟಕ್ಕೂ 'ಪಾರ್ಟ್ನರ್" ಡೇವಿಡ್ ಧವನ್ ನಿರ್ದೇಶನದ ಸಲ್ಮಾನ್‌‍ಖಾನ್, ಕತ್ರಿನಾ ಕೈಫ್, ಗೋವಿಂದ, ಲಾರಾದತ್ತ ತಾರಾಗಣದ ಹಾಸ್ಯಪ್ರಧಾನ ಚಿತ್ರ. ಬಾಲಿವುಡ್‌ನ ಚಿತ್ರಗಳು ಅಡ್ಡಡ್ಡ ಮಲಗುತ್ತಿದ್ದ ಸಂದರ್ಭದಲ್ಲಿ ಈ ಚಿತ್ರ ಎದ್ದು ನಿಂತಿದ್ದೇ ತಡ ಕತ್ರಿನಾಳ ಹಣೆಬರಹ ಬದಲಾಯಿತು. ಇಲ್ಲಿಯವರೆಗೂ ತಾಳ್ಮೆಯಿಂದ ಕಾದಿದ್ದು ಸಾರ್ಥಕವಾಯಿತು. ಈಗ ಯಶಸ್ಸಿನ ಸವಿಯನ್ನು ಉಣ್ಣುತ್ತಿದ್ದೇನೆ. ನನ್ನ ಸಂತೋಷಕ್ಕೆ ಪಾರವೇ ಇಲ್ಲ ಎನ್ನುತ್ತಾಳೆ ಕತ್ರಿನಾ.

ಈಕೆಯನ್ನು ಬಾಲಿವುಡ್‌ಗೆ ಪರಿಚಯಿಸಿದ್ದೇ ಸಲ್ಮಾನ್ ಖಾನ್. ಸದಾ ಆಕೆಯ ಬೆಂಬಲಕ್ಕಿರುತ್ತಾನೆ. ಅವನ ಜೊತೆ ಓಡಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಾಳೆ ಎಂಬ ಮಾತುಗಳನ್ನು ಕತ್ರಿನಾ ಸಾರಾಸಗಟಾಗಿ ತಳ್ಳಿಹಾಕುತ್ತಾಳೆ. ಸ್ಟೈಲಿಷ್ ಜನರೊಂದಿಗೆ ಓಡಾಡಿದರೆ ಪ್ರಚಾರ ಸಿಗುತ್ತದೆ ಎನ್ನುವುದು ಬರೀ ಭ್ರಮೆ. ಅದು ಹೆಚ್ಚು ದಿನ ನಡೆಯುವುದಿಲ್ಲ. ನಾವು ಹೇಗಿದ್ದೇವೋ ಹಾಗೆ ಜನರ ಮೆಚ್ಚುಗೆ ಗಳಿಸಬೇಕು ಎಂಬ ನುಡಿಮುತ್ತುಗಳನ್ನೂ ಉಲಿಯುತ್ತಾಳೆ ಕತ್ರಿನಾ.

ಅದೇ ಮರಸುತ್ತುವ, ಹಾಡು, ಕುಣಿತದ ಪಾತ್ರಗಳು ಕತ್ರಿನಾಗೆ ಬೇಸರ ತಂದಿವೆಯಂತೆ. ಸವಾಲೆಸೆಯುವ ಪಾತ್ರಗಳು, ನಟನೆಗೆ ಅವಕಾಶ ನೀಡುವ ಪಾತ್ರಗಳು ಸಿಗುತ್ತಿಲ್ಲ. 'ಪಾರ್ಟ್ನರ್" ಚಿತ್ರದಲ್ಲಿನ ಪಾತ್ರ ಪ್ರಬುದ್ಧವಾಗಿತ್ತು. ಜನ ನನ್ನನ್ನು ಗುರುತಿಸಿದರು. ಆ ಪಾತ್ರ ನನಗೆ ಹೆಚ್ಚು ಸಮಾಧಾನ ನೀಡಿತು. ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ. ಕೆಲವರು ಒಂದು ಬ್ರೇಕ್‌‍ಗಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ನನ್ನ ಜೀವನದಲ್ಲಿ ಯಶಸ್ಸು ಬಹುಬೇಗನೆ ಬಂತು. 14ರ ಪ್ರಾಯಕ್ಕೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟವಳು ನಾನು. ಆ ಹಿನ್ನಲೆಯಲ್ಲಿ ಬಾಲಿವುಡ್‌ಗೆ ಬಂದೆ. ಎರಡೂ ಕಡೆ ಕಲಿತ ಪಾಠಗಳಿಂದ ನಾನು ಪ್ರೌಢ ನಟಿಯಾಗಿದ್ದೇನೆ ಎಂದು ಕತ್ರಿನಾ ತಮ್ಮ 'ಆ ದಿನಗಳ"ನ್ನು ನೆನೆಯುತ್ತಾಳೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada