»   » ಅಮರ ಚೆಲುವೆ ಮಧುಬಾಲಾ ಆಗಿ ಕತ್ರೀನಾ

ಅಮರ ಚೆಲುವೆ ಮಧುಬಾಲಾ ಆಗಿ ಕತ್ರೀನಾ

Posted By:
Subscribe to Filmibeat Kannada

ಹಿಂದಿ ಚಿತ್ರರಂಗದ ಅಪ್ರತಿಮ ಚೆಲುವೆ, ದುರಂತ ನಾಯಕಿ ಮಧುಬಾಲಾ ಪಾತ್ರದಲ್ಲಿ ಮಿಂಚಲು ನೀಳಕಾಲ್ಗಳ ನಟಿ ಕತ್ರೀನಾ ಕೈಫ್ ತಯಾರಿ ನಡೆಸಿದ್ದಾರೆ. ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ ಜೀವನಾಧರಿತ ಚಿತ್ರವನ್ನು ಅನುರಾಗ್ ಬಸು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಕಿಶೋರ್ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸುತ್ತಿದ್ದಾರೆ. ಅಜ್ ಪ್ರೇಮ್ ಕಿ ಗಜಬ್ ಕಹಾನಿ ಚಿತ್ರದಲ್ಲಿ ಮೋಡಿ ಮಾಡಿದ್ದ ರಣಬೀರ್ ಕತ್ರೀನಾ ಜೋಡಿ ಮತ್ತೆ ಇಲ್ಲಿ ಒಂದಾಗಲಿದೆ.

ಹುಡುಗಾಟಿಕೆಯ ಪಾತ್ರಗಳಿಂದ ಗಂಭೀರ ಪಾತ್ರಗಳತ್ತ ರಣಬೀರ್ ಹಾಗೂ ಕತ್ರೀನಾ ಹೊರಳುವ ಸೂಚನೆ ಸಿಕ್ಕಿದೆ. ಈಗಾಗಲೇ ರಾಜ್ ನೀತಿ ಎಂಬ ಆಧುನಿಕ ಮಹಾಭಾರತ ಕಥೆಯಲ್ಲಿ ಈ ಇಬ್ಬರು ಯುವ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಈಗ ಬಾಲಿವುಡ್ ನ ತೆರೆಯ ಮೇಲಿನ ಹಾಗೂ ನಿಜ ಜೀವನದ ಅಮರ ಅಮೋಘ ಪ್ರೇಮ ಜೋಡಿಯಾದ ಕಿಶೋರ್ ಮಧುಬಾಲಾ ಅವರ ಅನುಕರಣೆ ಮಾಡಲು ರಣಬೀರ್ ಕತ್ರೀನಾ ಪೂರ್ವ ತಯಾರಿ ನಡೆಸಿದ್ದಾರೆ. ಆ ಇಬ್ಬರು ದಿಗ್ಗಜರ ಹಾವ ಭಾವ, ಅಭಿನಯದ ಬಗ್ಗೆ ಕಲಿಯಲು ಹಳೆ ಹಿಂದಿ ಚಿತ್ರಗಳನ್ನು ಒಂದೊಂದಾಗಿ ನೋಡುತ್ತಿದ್ದಾರೆ ಎಂಬುದು ಸುದ್ದಿ.

ಮುಘಲ್ ಇ ಅಜಾಂ, ಮಹಲ್, ಹೌರಾ ಬ್ರಿಡ್ಜ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಮಧುಬಾಲಾ, ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು. ಅವರ ಅಭಿನಯಕ್ಕೆ ನಾನು ಸರಿಸಾಟಿಯಾಗದಿದ್ದರೂ ಪ್ರಯತ್ನಪಡುತ್ತೇನೆ ಎಂದು ಕತ್ರೀನಾ ಹೇಳಿದ್ದಾರೆ. ಚಲ್ತಿ ಕಾ ನಾಮ್ ಗಾಡಿ ಚಿತ್ರದ 'ಎಕ್ ಲಡ್ಕಿ ಭೀಗಿ ಭಾಗಿಸಿ . . ' ಜನಪ್ರಿಯ ಹಾಡನ್ನು ಮತ್ತೆ ತೆರೆಗೆ ತರಲು ಅನುರಾಗ್ ಬಯಸಿದ್ದಾರೆ.

ಅಲ್ಲದೆ, ಈ ಹಾಡಿಗೆ ಕಿಶೋರ್ ಅವರ ಪುತ್ರ ಅಮಿತ್ ಕುಮಾರ್ ಅವರಿಂದಲೇ ಹಿನ್ನೆಲೆ ಗಾಯನವಾಗಲಿ ಎಂಬುದು ನಿರ್ದೇಶಕರ ಆಸೆ. ಗತ ವೈಭವದ ಅಮರ ಜೋಡಿಗಳನ್ನು ಮತ್ತೆ ಪ್ರೇಕ್ಷಕರಿಗೆ ನೆನಪು ಮಾಡಿಕೊಡುವ ಸನ್ನಾಹದಲ್ಲಿದೆ ಈ ಚಿತ್ರತಂಡ.ಗಾಯಕ, ನಟ, ಲೇಖಕ, ಸಂಯೋಜಕ, ತಂದೆ ಹಾಗೂ ಪತಿಯಾಗಿ ಒಟ್ಟಾರೆ ಕಿಶೋರ್ ಜೀವನದ ಸಂಪೂರ್ಣ ಚಿತ್ರಣವನ್ನು ನೀಡಲು ಅನುರಾಗ್ ಮುಂದಾಗಿದ್ದಾರೆ.

ನಿರ್ದೇಶಕ ಗುರುದತ್ ಅವರ ಜೀವನಾಧಾರಿತ ಚಿತ್ರದಲ್ಲಿ ಗುರ್ ದತ್ ಆಗಿ ಅಮೀರ್ ಖಾನ್ ಹಾಗೂ ವಹೀದಾ ರೆಹಮಾನ್ ಪಾತ್ರದಲ್ಲಿ ಕತ್ರೀನಾ ನಟಿಸುತ್ತಿದ್ದಾರೆ. ಕಾಗಜ್ ಕೆ ಫೂಲ್ ಚಿತ್ರದ ಛಾಪು ಮೂಡಿಸುವ ಪೋಸ್ಟರ್ ಗಳಲ್ಲಿ ಅಮೀರ್ ಖಾನ್ ಜೋಡಿಯಲ್ಲಿ ಕತ್ರೀನಾ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿನಿವ್ಯಕ್ತಿಯೊಬ್ಬರ ಜೀವನ ಕಥೆಯುಳ್ಳ ಚಲನಚಿತ್ರಗಳತ್ತ ಯಾಕೋ ಕತ್ರೀನಾ ಮನಸ್ಸು ಮಾಡಿದ್ದಂತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada