»   » ಶೋಲೆ, ಸಾಗರ್ ಖ್ಯಾತಿಯ ಜಿಪಿ ಸಿಪ್ಪಿ ಇನ್ನಿಲ್ಲ

ಶೋಲೆ, ಸಾಗರ್ ಖ್ಯಾತಿಯ ಜಿಪಿ ಸಿಪ್ಪಿ ಇನ್ನಿಲ್ಲ

Posted By:
Subscribe to Filmibeat Kannada

ಮುಂಬೈ, ಡಿ.26: ಹಾಲಿವುಡ್‌ ಬೆಳ್ಳಿತೆರೆಯ ಮೇಲೆ 'ಗಾಡ್‌ಫಾದರ್' ಸಿನಿಮಾ ಹೇಗೋ ಭಾರತೀಯ ಸಿನಿಮಾಗಳಲ್ಲಿ 'ಶೋಲೆ' ಹಾಗೆ. ಪ್ರತಿಭೆ ಎಷ್ಟೇ ಇರಲಿ 'ಶೋಲೆ'ಯನ್ನು ಮತ್ತೆ ಸೃಷ್ಟಿಸಲು ಸಾಧ್ಯವೇ? ಇತ್ತೀಚೆಗೆ ರಾಮ್‌ಗೋಪಾಲ್ ವರ್ಮಾ ಮಾಡಿದ ಪ್ರಯತ್ನವೇ ಇದಕ್ಕೆ ಸಾಕ್ಷಿ. ಆ ರೀತಿ ಅದ್ಭುತ ಚಿತ್ರದ ನಿರ್ಮಾಪಕ ಜಿ.ಪಿ ಸಿಪ್ಪಿ(93) ಮಂಗಳವಾರ (ಡಿ.25) ಮುಂಬೈಯಲ್ಲಿ ನಿಧನರಾದರು.

'ಶೋಲೆ' ಚಿತ್ರ ಕರ್ನಾಟಕದ ರಾಮನಗರದಲ್ಲಿ ಚಿತ್ರೀಕರಣಗೊಂಡಿತ್ತು. ಈ ಚಿತ್ರ ಮತ್ತೆಷ್ಟೋ ಚಿತ್ರಗಳಿಗೆ, ಚಿತ್ರಕತೆಗಳಿಗೆ ಸ್ಪೂರ್ತಿಯಾಗಿತ್ತು. ರಾಮ್‌ಗೋಪಾಲ್ ವರ್ಮಾ 'ಶೋಲೆ' ಚಿತ್ರವನ್ನು ರಿಮೇಕ್ ಮಾಡಲು ಹೋಗಿ ಅದನ್ನು ಕೊಲೆ ಮಾಡಿದ್ದು ಇದೀಗ ಇತಿಹಾಸ. ರಾಮ್ ಗೋಪಾಲ್ ಅವರ ಆಗ್ ಚಿತ್ರವನ್ನು ಗೋರಿಯಲ್ಲೂ ಸಿಪ್ಪಿ ನೆನೆಸಿಕೊಳ್ಳಲಿಕ್ಕಿಲ್ಲ.

ಅದಿರಲಿ, ಮೂವತ್ತೆರಡು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಶೋಲೆ ಎಂಥ ಮಾಯಾಜಾಲವನ್ನು ಹರಡಿತ್ತೆಂದರೆ ಸತತ ಐದು ವರುಷಗಳ ಕಾಲ ಚಿತ್ರ ಮುಂಬೈನ ಮಿನರ್ವಾ ಚಿತ್ರಮಂದಿರದಿಂದ ಬಿಟ್ಟೆದ್ದಿದ್ದಿಲ್ಲ. ಮುಂಬೈ ಚಿತ್ರಮಂದಿರಗಳಲ್ಲಿ ಅಂದಿನ ಕಾಲದಲ್ಲಿ ಟಿಕೆಟ್ ಬೆಲೆ 15 ರೂ. ಬ್ಲಾಕಲ್ಲಿ 200 ರೂ.ಗೆ ಮಾರಾಟವಾಗಿತ್ತು. ಚಿತ್ರದ ನಿರ್ಮಾಣ ಸಂದರ್ಭದಲ್ಲಿ ಧರ್ಮೇಂದ್ರ ಗುರಿತಪ್ಪಿ ಹಾರಿಸಿದ ಗುಂಡು ಅಮಿತಾಭ್ ಕಾಲಿಗೆ ತಗಲಿ ಅವರು ಗಾಯಗೊಂಡಿದ್ದರು.

ಸಿಪ್ಪಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 1955ರಲ್ಲಿ 'ಮರೀನ್ ಡ್ರೈವ್' ಚಿತ್ರದ ಮೂಲಕ. ಒಂದು ಕಾಲದಲ್ಲಿ ಚಾಪೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸಿಪ್ಪಿ ನಂತರ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. 'ಶ್ರೀಮತಿ 420', 'ಮಿ.ಇಂಡಿಯಾ', 'ಅಂದಾಜ್' ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ಹೊಸದೊಂದು ಅಧ್ಯಾಯಕ್ಕೆ ನಾಂದಿ ಹಾಡಿದರು. ನಂತರದ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಿಪ್ಪಿ ಚಿತ್ರರಂಗವನ್ನೇ ತೊರೆದಿದ್ದರು. 1972ರಲ್ಲಿ ತಮ್ಮ ಪುತ್ರ ರಮೇಶ್ ಸಿಪ್ಪಿಯೊಂದಿಗೆ 'ಸೀತಾ ಔರ್ ಗೀತಾ' ಚಿತ್ರವನ್ನು ನಿರ್ಮಿಸುವ ಮೂಲಕ ಫೀನಿಕ್ಸ್‌ನಂತೆ ಎದ್ದು ಬಂದಿದ್ದರು.

1975ನೇ ವರ್ಷ ಸಿಪ್ಪಿ ಜೀವನದಲ್ಲಿ ಮರೆಯಲಾಗದ ವರ್ಷ. ಅಮಿತಾಭ್ ಬಚ್ಚನ್, ಹೇಮಮಾಲಿನಿ, ಧರ್ಮೇಂದ್ರ, ಅಮ್ಜದ್‌ಖಾನ್, ಸಂಜೀವ್‌ಕುಮಾರ್ ತಾರಾಗಣದ ಶೋಲೆ ಬಿಡುಗಡೆಯಾಗಿದ್ದು, ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದ್ದು ಇತಿಹಾಸ. ಶೋಲೆ ಚಿತ್ರಕ್ಕೆ ಖರ್ಚಾಗಿದ್ದು 3 ಕೋಟಿ ರೂ. ಈ ಚಿತ್ರ ಅಂದಾಜು 34 ಕೋಟಿ ರೂ.ಗಳನ್ನು ಸಿಪ್ಪಿಗೆ ತಂದುಕೊಟ್ಟಿತ್ತು.

ಆನಂತರ ಅವರ ನಿರ್ಮಾಣದಲ್ಲಿ 'ರಾಜು ಬನ್‌ಗಯಾ ಜಂಟಲ್‌ಮನ್', 'ಶಾನ್', 'ಮೇರೆ ಸನಮ್', 'ಸಾಗರ್', 'ಹಮೇಶಾ' ಮತ್ತು 'ಬಾಲ್ ಬ್ರಹ್ಮಚಾರಿ' ಚಿತ್ರಗಳು ತೆರೆಕಂಡಿದ್ದವು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada