ಶೋಲೆ ಖ್ಯಾತಿಯ ಸಂಕಲನಕಾರ ಶಿಂಧೆ ದೈವಾಧೀನ

ಮುಂಬೈನ ಧಾರಾವಿಯಲ್ಲಿರುವ (ಏಷ್ಯಾದ ಅತಿದೊಡ್ಡ ಕೊಳಗೇರಿ) ಅವರ ನಿವಾಸರಲ್ಲಿ ಶಿಂಧೆ ಕಣ್ಮುಚ್ಚಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಯಾವುದೇ ಕಾಯಿಲೆ ಕಸಾಲೆ ಇರಲಿಲ್ಲ ಎಂದು ಅವರ ಹಿರಿಯ ಪುತ್ರಿ ಪ್ರೇರಣಾ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಶಿಂಧೆ ಅವರು 100ಕ್ಕೂ ಅಧಿಕ ಹಿಟ್ ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಶೋಲೆ, ಸೀತಾ ಔರ್ ಗೀತಾ, ಬ್ರಹ್ಮಚಾರಿ, ಚಮತ್ಕಾರ್ ಸೇರಿದಂತೆ ಮುಂತಾದ ಚಿತ್ರಗಳನ್ನು ಹೆಸರಿಸಬಹುದು.
ಮುಂಬೈನ ಧಾರಾವಿಯಲ್ಲಿನ 160 ಚದರಡಿ ವಿಸ್ತೀರ್ಣದ ಕೊಠಡಿಯಲ್ಲಿ ಅವರು ತಮ್ಮ ಕಿರಿಯ ಪುತ್ರಿ ಜೊತೆ ವಾಸವಾಗಿದ್ದರು. ಧಾರಾವಿ ಸ್ಲಂ ಪ್ರದೇಶಕ್ಕೂ ಮುನ್ನ ಅವರು ಸೆಂಟ್ರಲ್ ಮುಂಬೈನ ಬಹುಮಹಡಿ ಕಟ್ಟಡವೊಂದರಲ್ಲಿ ತಮ್ಮ ಮಗಳೊಂದಿಗೆ ವಾಸವಾಗಿದ್ದರು. ಆದರೆ ಆ ಕಟ್ಟಡದಲ್ಲಿ ಸಮಸ್ಯೆಯುಂಟಾದ ಕಾರಣ ಅವರನ್ನು ಬಲವಂತವಾಗಿ ಅಲ್ಲಿಂದ ಹೊರಹಾಕಿದ್ದರು.
ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳಿಗೆ ಈ ಹಿರಿ ಜೀವ ತುತ್ತಾಗಿದ್ದರೂ ಬಾಲಿವುಡ್ ನ ದಿಗ್ಗರು ಯಾರೂ ಇತ್ತ ತಿರುಗಿಯೂ ನೋಡಿರಲಿಲ್ಲ. ರಮೇಶ್ ಸಿಪ್ಪಿ ಅವರ ಬಹುತೇಕ ಚಿತ್ರಗಳಿಗೆ ಸಂಕಲನಕಾರರಾಗಿ ಶಿಂಧೆ ದುಡಿದಿದ್ದಾರೆ. ಶೋಲೆ (1975) ಚಿತ್ರದ ಸಂಕಲನಕ್ಕಾಗಿ ಫಿಲಂಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು. (ಪಿಟಿಐ)


Click it and Unblock the Notifications











