ಬ್ಯಾಂಕ್ ಜನಾರ್ಧನ್ ಕನ್ನಡ ಚಿತ್ರರಂಗದ ಹಿರಿಯ ನಟ. 1948ರಲ್ಲಿ ಹೊಳಲ್ಕೆರೆಯಲ್ಲಿ ಹುಟ್ಟಿ ಬೆಳೆದವರು. ಬ್ಯಾಂಕ್ ಉದ್ಯೋಗಿ ಆಗಿದ್ದ ಜನಾರ್ಧನ್ ಸಂಬಳ ಸಾಲದೇ ಬಣ್ಣದಲೋಕದಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾ ಮಾತ್ರವಲ್ಲದೇ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡು ಹಾಸ್ಯ ನಟರಾಗಿ ತಮ್ಮದೇಯಾದ ಛಾಪು ಮೂಡಿಸಿದ್ದರು.
ಸಿನಿ ಜೀವನ
ಬ್ಯಾಂಕ್ ಜನಾರ್ಧನ್ 1985ರಲ್ಲಿ ತೆರೆಕಂಡ 'ಪಿತಾಮಹ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಪಾಪಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
ಶಿವರಾಜ್‌ಕುಮಾರ್, ರವಿಚಂದ್ರನ್, ಶಂಕರ್ ನಾಗ್, ಅನಂತ್ ನಾಗ್ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸಿದ್ದಾರೆ. ದೊಡ್ಡಮಟ್ಟಕ್ಕೆ ಅವಕಾಶಗಳು ಸಿಗದೇ ಇದ್ದರೂ ಸಿಕ್ಕ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿ ಗೆದ್ದಿದ್ದರು. ಶಾಲಾ ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಹಾಗಾಗಿ ಕೊನೆಗೆ ಚಿತ್ರರಂಗ ಪ್ರವೇಶಿಸಿದರು. ಉಪೇಂದ್ರ ಹಾಗೂ ಕಾಶಿನಾಥ್ ಸಿನಿಮಾಗಳಲ್ಲಿ ಒಳ್ಳೆ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು.
ಬ್ಯಾಂಕ್ ಜನಾರ್ಧನ್ ಹೆಸರು
ಹೆಸರಿನ ಜೊತೆ 'ಬ್ಯಾಂಕ್'ಜನಾರ್ಧನ್ ಅವರು ಬ್ಯಾಂಕ್ ನೌಕರನಾಗಿದ್ದುಕೊಂಡೇ ಚಿತ್ರಗಳಲ್ಲಿ ನಟಿಸುತ್ತಿದ್ದರು. ಜನಾರ್ಧನ್ ಎಂಬ ಹೆಸರಿನ ಸಾಕಷ್ಟು ಜನ ಆಗ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ವಿಭಿನ್ನವಾಗಿರಲಿ, ಗುರ್ತಿಸಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಪಿಆರ್‌ಓ ಆಗಿದ್ದ ನಾಗೇಂದ್ರ ಅವರು ಇನ್ನು ಮುಂದೆ ನಿಮ್ಮ ಹೆಸರನ್ನು ಬ್ಯಾಂಕ್ ಜನಾರ್ಧನ್ ಎಂದು ಬದಲಿಸಿಕೊಳ್ಳಿ ಎಂದಿದ್ದರು. ಅವರ ಸಲಹೆಯಂತೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಖಾಯಂ ಆಗಿತ್ತು.
ಹೃದಯಾಘಾತ: 3 ಬಾರಿ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿತ್ತು. ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ನಿಧನ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ 2025ರ ಏಪ್ರಿಲ್ 14ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾದರು.