ಸಿ.ಆರ್.ಸಿಂಹ ಎಂದೇ ಖ್ಯಾತವಾಗಿರುವ ಚೆನ್ನರಾಯಪಟ್ಟಣ ರಾಮಸ್ವಾಮಿ ಸಿಂಹ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ದೇಶಕ ರಂಗಭೂಮಿ ಕಲಾವಿದ ಮತ್ತು ಸಾಹಿತಿ. ಬೆಂಗಳೂರಿನ ಪ್ರಸಿದ್ಧ ನಾಟಕ ತಂಡ `ಪ್ರಭಾತ್ ಕಲಾವಿದರು' ಸೇರಿದ ಸಿಂಹ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ. 1972 ರಲ್ಲಿ `ನಟರಂಗ' ಎಂಬ ನಾಟಕ ತಂಡ ಕಟ್ಟಿ `ಕಾಕನಕೋಟೆ',`ತುಘಲಕ್',`ಸಂಕ್ರಾತಿ' ಮುಂತಾದ ಯಶಸ್ವಿ ನಾಟಕಗಳನ್ನು ನಿರ್ದೇಶಿಸಿದರು.
ಸಿನಮಾ ಮತ್ತು ನಾಟಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಿಂಹರಿಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇವರು ರಂಗಭೂಮಿಗೆ ಸಲ್ಲಿಸಿದ ಸೇವೆ ಪರಿಗಣಿಸಿದ ಭಾರತ ಸರ್ಕಾರ 2003 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು. ಇವರ ಸಹೋದರ ಶ್ರೀನಾಥ್ ಕನ್ನಡ ಚಿತ್ರರಂಗದಲ್ಲಿ ಪ್ರಣಯರಾಜ ಎಂದೇ ಪ್ರಸಿದ್ಧರಾಗಿದ್ದಾರೆ.
ಹಿನ್ನಲೆ
1942 ರಲ್ಲಿ ಜನಿಸಿದ ಸಿಂಹರವರು ಕೇವಲ 12 ನೇ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದರು. ಚಿತ್ರರಂಗದಲ್ಲಿ ಕೂಡ ಸಕ್ರಿಯವಾಗಿದ್ದ ಇವರು ಸುಮಾರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಶಸ್ತಿ ವಿಜೇತ ಚಿತ್ರಗಳಾದ `ಸಂಸ್ಕಾರ',`ಬರ',`ಚಿತೆಗೂ ಚಿಂತೆ' ,`ಅನುರೂಪ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ನಟನೆಯಲ್ಲದೇ ಸಿಂಹ `ಕಾಕನಕೋಟೆ',`ಶಿಕಾರಿ',`ಸಿಂಹಾಸನ',`ಅಶ್ವಮೇಧ',`ಅಂಗೈಯಲ್ಲಿ ಅಪ್ಸರೆ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕಿರುತೆರೆ
ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಶಂಕರನಾಗ್‌ರ `ಮಾಲ್ಗುಡಿ ಡೇಸ್'ನಲ್ಲಿ ಕೂಡ ನಟಿಸಿದ್ದಾರೆ. ಗೋರೂರು ರಾಮಸ್ವಾಮಿ ಅಯ್ಯಂಗಾರ್‌ರ `ಅಮೇರಿಕಾದಲ್ಲಿ ಗೋರೂರು' ಪ್ರವಾಸ ಕೃತಿಯನ್ನು ಧಾರಾವಾಹಿಯಾಗಿಸಿ ಅಮೇರಿಕಾ, ನ್ಯೂಯಾರ್ಕ, ನಯಾಗರಾ ಫಾಲ್ಸ್, ಡಿಸ್ನಿ ಲ್ಯಾಂಡ್, ಯುನಿವರ್ಸಲ್ ಸ್ಟುಡಿಯೋಗಳಲ್ಲಿ ಚಿತ್ರೀಕರಿಸಿದ್ದರು.
ಬರವಣಿಗೆ
ಸಿಂಹರವರು ಐದು ನಾಟಕಗಳನ್ನು ಬರೆದು ಪ್ರಕಾಶಿಸಿದ್ದಾರೆ. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ `ನಿಮ್ಮ ಸಿಂಹ' ಎಂಬ ಅಡಿಬರಹದಲ್ಲಿ ಆರು ವರ್ಷಗಳ ಕಾಲ ಅಂಕಣಗಳನ್ನು ಬರೆದಿದ್ದಾರೆ. ಇದರಲ್ಲಿ ಮೂರು ಸಂಪುಟಗಳನ್ನು ಪುಸ್ತಕ ಮಾಡಿ ಪ್ರಕಾಶಿಸಿದ್ದಾರೆ.
ಅಂತ್ಯ
ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ ಇವರು ಫೆಬ್ರವರಿ 28,2014 ರಂದು ಬನಶಂಕರಿಯ ಸೇವಾ ಕ್ಷೇತ್ರ ಹಾಸ್ಪಿಟಲಿನಲ್ಲಿ ನಿಧನರಾದರು.