ಚರಣರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚರಣರಾಜ್ ಮೂಲತಃ ಕೊಡಗಿನವರು.
ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಪೆರುಂಬವೂರ್ ರಾಘವೇಂದ್ರರವರಿಂದ ಕರ್ನಾಟಕ ಸಂಗಿತ ಕಲಿತರು. ನಂತರ ನೀಷಿಯಾ ಮಜೊಲ್ಯ್ ಹತ್ತಿರ ಶಾಸ್ತ್ರೀಯ ಸಂಗೀತ ಕಲಿತರು. ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ಪಿಯಾನೋದಲ್ಲಿ ಗ್ರೇಡ್ 8 ಸರ್ಟಿಫಿಕೇಟ್ ಕೂಡ ಪಡೆದಿದ್ದಾರೆ.
ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದಿರುವ ಇವರು 2014 ರಲ್ಲಿ ತೆರೆಕಂಡ `ಹರಿವು' ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಒಂದು ಮಲಯಾಳಂ ಅಲ್ಬಮ್ ಮತ್ತು `ವಿಂಡ್ಸ್ ಆಫ್ ಸಂಸಾರ' ಎಂಬ ಅಲ್ಬಮ್‌ಗಳ ವೋಕಲ್‌ಗಳಿಗೆ ಸಂಗೀತ ನೀಡಿದ್ದರು.
`ಗೋಧಿ ಬಣ್ಣ ಸಾಧಾರಣ ಮೈಕಟ್ಟು',``ಪುಷ್ಪಕ ವಿಮಾನ' ಇವರಿಗೆ ಜನಪ್ರಿಯತೆ ತಂದುಕೊಟ್ಟ ಚಿತ್ರಗಳು. `ಜೀರ್ಜಿಂಬೆ' ಚಿತ್ರದ ಸಂಗೀತಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದರು.
2018 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ಟಗರು' ಚಿತ್ರದ ಸಂಗೀತಕ್ಕಾಗಿ ಅಪಾರ ಪ್ರಶಂಸೆ ಪಡೆದರು. ಈ ಚಿತ್ರದಲ್ಲಿ ಬೀಟ್ ಹಾಡುಗಳ ಜೊತೆಗೆ ಮಧುರ ಹಾಡುಗಳನ್ನು ಬೆರೆಸಿ ಉತ್ಕೃಷ್ಟ ಸಂಗೀತ ನೀಡಿದರು.