ಹುಚ್ಚ ವೆಂಕಟ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದ ವೆಂಕಟರಮಣ್ ಲಕ್ಷ್ಮಣ್ ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 19ರಂದು ಜನಿಸಿದರು. ತಂದೆ ಎಮ್.ಲಕ್ಷ್ಮಣ್ ಹಾಗೂ ತಾಯಿ ಗೌರಮ್ಮ. ವೆಂಕಟ್ ಡಿಪ್ಲೋಮೊ ಇನ್ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಅರ್ಧಕ್ಕೆ ನಿಲ್ಲಿಸಿದ್ದಾರೆ.
ವೃತ್ತಿಜೀವನ
ಹುಚ್ಚ ವೆಂಕಟ್ 2005ರಲ್ಲಿ 'ಮೆಂಟಲ್ ಮಂಜ' ಸಿನಿಮಾದಲ್ಲಿ ಸಹನಟನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲ ಕನ್ನಡ ಸಿನಿಮಾಗಳಿಗೆ ತಮ್ಮದೆಯಾದ ಧ್ವನಿಯನ್ನು ನೀಡಿ, ಸೈ ಎನಿಸಿಕೊಂಡರು. 2015ರಲ್ಲಿ 'ಹುಚ್ಚ ವೆಂಕಟ್' ಎಂಬ ಸಿನಿಮಾ ನಿರ್ದೇಶಿಸಿ, ನಾಯಕನಾಗಿ ನಟಿಸಿದರು. ನಂತರ ಸ್ವತಂತ್ರ ಪಾಳ್ಯ, ಪೊರ್ಕಿ ಹುಚ್ಚ ವೆಂಕಟ್ ಸಿನಿಮಾಗಳನ್ನು ನಿರ್ದೇಶಿದ್ದಾರೆ.
ಬಿಗ್‌ಬಾಸ್
ಹುಚ್ಚ ವೆಂಕಟ್ ಬಿಗ್‌ಬಾಸ್ ಕನ್ನಡ ಸೀಸನ್ 3ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಎದುರಲ್ಲೇ ಸಹ ಸ್ಫರ್ಧಿ ರವಿ ಮೂರೂರ್ ಮೇಲೆ ಹಲ್ಲೆ ಮಾಡಿದ್ದರು. ಕೂಡಲೇ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರಹಾಕಲಾಗಿತ್ತು. ಇದಾದ ಬಳಿಕ ಹುಚ್ಚ ವೆಂಕಟ್ ನಾಲ್ಕನೇ ಸೀಸನ್‌ನಲ್ಲಿ ಅತಿಥಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದರು. ಈ ಸಂದರ್ಭ ಆ ಸೀಸನ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಒಳ್ಳೆ ಹುಡುಗ ಪ್ರಥಮ್ ಅವರ ಮೇಲೆ ಹಲ್ಲೆ ಮಾಡಿದ್ದರು. ಬಿಗ್‌ಬಾಸ್ ಆಯೋಜಕರು ತಕ್ಷಣ ಅವರನ್ನು ಮನೆಯಿಂದ ಹೊರ ಕರೆದುಕೊಂಡು ಬಂದಿದ್ದರು.