ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆ ಎಂದು ಖ್ಯಾತಿ ಪಡೆದಿದ್ದ ಕಲ್ಪನಾ ಕನ್ನಡದ ಮೊದಲ ಸ್ಟಾರ್ ನಟಿ. ಸುಮಾರು ಒಂದುವರೆ ದಶಕ ತಮ್ಮ ಮನಮೋಹಕ ಅಭಿನಯದಿಂದ ಕನ್ನಡ ಚಿತ್ರರಂಗವನ್ನು ಆಳಿದ ಕಲ್ಪನಾ ಕನ್ನಡ ಚಿತ್ರರಂಗದ ಧ್ರುವತಾರೆ.
ಬಾಲ್ಯ
1942 ರಲ್ಲ್ಲಿ ಮಂಗಳೂರಿನಲ್ಲಿ ಜನಿಸಿದ ಕಲ್ಪನಾರ ತಂದೆ ಕೃಷ್ಣ ಮೂರ್ತಿ ,ತಾಯಿ ಜಾನಕಮ್ಮ. ಇವರ ಬಾಲ್ಯದ ಹೆಸರು ಶರತ್ ಲತಾ. ಇವರ ಮಾತೃಭಾಷೆ ತುಳು .ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿಯಿದ್ದ ಇವರು ಮುಂದೆ ರಂಗಭೂಮಿಯ ಸ್ತ್ರೀ ನಾಟಕ ಮಂಡಳಿ ಸೇರುತ್ತಾರೆ.
ಸಿನಿಪಯಣ
1963 ರಲ್ಲಿ ಬಿ.ಆರ್.ಪಂತಲುರವರ `ಸಾಕುಮಗಳು' ಚಿತ್ರದಿಂದ ಸಿನಿಪಯಣ ಆರಂಭಿಸಿದ ಕಲ್ಪನಾಗೆ ಮಿನುಗು ತಾರೆ ಹೆಸರು ಬಂದಿದ್ದು `ಬೆಳ್ಳಿಮೋಡ' ಚಿತ್ರದ `ಬೆಳ್ಳಿಮೋಡದ ಅಂಚಿನಿಂದ ಓಡಿಬಂದಾ ಮಿನುಗುತಾರೆ' ಎಂಬ ಹಾಡಿನಿಂದ.ಈ ಚಿತ್ರ ಇವರಿಗೆ ಬ್ರೇಕ್ ನೀಡಿದ ಮೊದಲ ಚಿತ್ರ. ನಂತರ `ಶರಪಂಜರ',`ಗೆಜ್ಜೆ ಪೂಜೆ', ಗಂಧದ ಗುಡಿ' ಮುಂತಾದ ಚಿತ್ರಗಳಲ್ಲಿನ ಮನೋಘ್ಞ ಅಭಿನಯದಿಂದ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗುತ್ತಾರೆ.ಕನ್ನಡ ಮಾತ್ರವಲ್ಲದೇ ತಮಿಳು,ತೆಲುಗು ,ಮಲಯಾಳಂ ಮತ್ತು ತುಳು ಭಾಷೆಯಲ್ಲಿ ತಲಾ ಒಂದರಂತೆ ಚಿತ್ರಗಳಲ್ಲಿ ನಟಿಸಿದ್ದಾರೆ. `ಬೆಳ್ಳಿಮೋಡ',ಹಣ್ಣಲೆ ಚಿಗುರಿದಾಗ',`ಶರಪಂಜರ' ಚಿತ್ರದಲ್ಲಿನ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.
ಇವರು ತಮ್ಮ ಪ್ರಬುದ್ಧ ಅಭನಯ, ಚುರುಕು ಮಾತು ಮತ್ತು ಅಸಂಪ್ರದಾಯಬದ್ಧ ಜೀವನ ಶೈಲಿಯಿಂದ ಪ್ರಸಿದ್ಧರಾಗಿದ್ದರು.ಸುಮಾರು 78 ಚಿತ್ರಗಳಲ್ಲಿ ಅಭಿನಯಿಸಿದ ಕಲ್ಪನಾರ ಕೊನೆಯ ಚಿತ್ರ `ಅನುರಾಗ ಬಂಧನ'.
ದುರಂತ ಅಂತ್ಯ
ಪುಟ್ಟಣ್ಣ ಕಣಗಾಲ್ ತಂಡದಿಂದ ಹೊರಬಂದ ಕಲ್ಪನಾಗೆ ನಟಿಸಲು ಚಿತ್ರಗಳು ಸಿಕ್ಕರೂ ತೂಕದ ಪಾತ್ರಗಳು ಸಿಗಲಿಲ್ಲ. ಬರುಬರುತ್ತಾ ಚಿತ್ರಗಳು ಕಡಿಮೆಯಾಗುತ್ತ ಬಂದ ಹಾಗೆ ತಮ್ಮ ಹಣಕಾಸಿನ ಹೊರಯನ್ನು ಕಡಿಮೆ ಮಾಡಲು ಮತ್ತೆ ರಂಗಭೂಮಿಯತ್ತ ಮುಖಮಾಡಿದರು. ಉತ್ತರ ಕರ್ಣಾಟಕದ ಪ್ರಸಿದ್ಧ ನಾಟಕಕಾರ ಗುಡಗೇರಿ ಬಸವರಾಜರವರ ತಂಡ ಸೇರಿದ ಕಲ್ಪನಾ ನಾಟಕಗಳಲ್ಲಿ ಅಭಿನಯಿಸತೊಡಗಿದರು.
ಇಸಬು ಅಥವಾ ಉರುಪು (ಚರ್ಮರೋಗ) ಸಮಸ್ಯೆಯಿಂದ ಬಳಲುತ್ತಿದ್ದ ಕಲ್ಪನಾ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು. ಖಿನ್ನತೆಯಿಂದ ನಿದ್ದೆ ಬಾರದಿದ್ದಾಗ ದಿನಾಲು ನಿದ್ದೆ ಮಾತ್ರೆಯನ್ನು ಬಳಸುತ್ತಿದ್ದರು.
ಸಂಕೇಶ್ವರದಲ್ಲಿ `ಕುಮಾರ ರಾಮ' ನಾಟಕವಾಡುವಾಗ ಗುಡಗೇರಿ ಬಸವರಾಜ್ ಕುಮಾರ ರಾಮ ಪಾತ್ರ ಮಾಡುತ್ತಿದ್ದರೆ, ಕಲ್ಪನಾ ಮಲತಾಯಿ ಪಾತ್ರ ಮಾಡುತ್ತಿದ್ದರು. ನಾಟಕದಲ್ಲಿ ಕುಮಾರರಾಮ `ಹಸಿವಾಗಿದೆ' ಎಂದಾಗ ಕಲ್ಪನಾ `ರೊಟ್ಟಿ ತಿನ್ನು' ಎಂದು ಹೇಳುವ ಬದಲು `ಹುಲ್ಲು ತಿನ್ನು' ಎಂದು ಹೇಳಿದಾಗ ಜನರು ಬಿದ್ದು ಬಿದ್ದು ನಗುತ್ತಾರೆ. ಇದರಿಂದ ಅವಮಾನಿತನಾದ ಬಸವರಾಜ್ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿ ಪರದೆ ಹಿಂದೆ ಹೋಗಿ ಕಲ್ಪನಾ ಕೆನ್ನೆಗೆ ಹೊಡೆಯುತ್ತಾರೆ. ಅವಮಾನಿತಳಾದ ಕಲ್ಪನಾ ನೇರವಾಗಿ `ಗೋಟುರು' ಪ್ರವಾಸಧಾಮಕ್ಕೆ ಹೋಗಿ 56 ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಶರಣಾಗುತ್ತಾರೆ.
ಕಲ್ಪನಾರ ಮೇಲೆ ರಚಿತವಾದ ಪುಸ್ತಕಗಳು
ಕಲ್ಪನಾ ವಿಲಾಸ - ರವಿ ಬೆಳಗೆರೆ
ರಜತರಂಗದ ಧ್ರುವತಾರೆ (ಸಾವಿರ ಪುಟಗಳ ಬೃಹತ ಸಂಪುಟ)- ವಿ.ಶ್ರೀಧರ್
ಪ್ರಸಿದ್ಧ ಚಿತ್ರಗಳು
ಬೆಳ್ಳಿಮೋಡ
ಗೆಜ್ಜೆಪೂಜೆ
ಶರಪಂಜರ
ಸರ್ವಮಂಗಳಾ
ನಾಂದಿ
ಬಯಲುದಾರಿ
ಹಣ್ಣಲೆ ಚಿಗುರಿದಾಗ
ಗಂಧದ ಗುಡಿ
ಎರಡು ಕನಸು