ಮಂಡ್ಯ ಮೂಲದವರಾದ `ಎಂ.ಎನ್.ಲಕ್ಷೀದೇವಿ' ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳವರೆಗೆ 600 ಕ್ಕೂ ಹೆಚ್ಚು ಪಾತ್ರಗಳಿಗೆ ಬಣ್ಣ ಹಚ್ಚಿ ಕನ್ನಡ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಾಲ್ಯದಲ್ಲಿ ಗ್ರಾಮಾ ಫೋನ್‌ನಲ್ಲಿ ಹಾಡು ಕೇಳಿ ತಾನೂ ಹಾಡಬೇಕು ಎಂದು ಬಯಸುತ್ತಿದ್ದರು. ಮೈಸೂರಿನಲ್ಲಿರುವ ತಮ್ಮ ಪರಿಚಿತರಿಗೆ ಹೇಳಿ `ಬಿಂದು.ಬಿ' ಸಿನಿಮಾದಲ್ಲಿ ಹಾಡಲು ಅವಕಾಶ ಪಡೆದರು. ಮೂರು ಜನ ಸಹ ಗಾಯಕಿಯೊರಂದಿಗೆ ಸೇರಿ ಆ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಲು ಇವರನ್ನು ಚಿತ್ರದ ಸಂಗೀತ ನಿರ್ದೇಶಕರು ಮದ್ರಾಸ್‌ಗೆ ಕೆರೆದಿದ್ದರು. ಆದರೆ ಆ ಚಿತ್ರ ಆರ್ಧಕ್ಕೆ ನಿಂತು ಹೋಯಿತು.ಇಲ್ಲಿಗೆ ಇವರ ಗಾಯಕಿಯಾಗುವ ಕನಸಿಗೆ ನೀರು ಬಿತ್ತು.
ನಂತರ ನೃತ್ಯವನ್ನು ಅಭ್ಯಸಿಸಿದ ಇವರು ಹಲವಾರು ನೃತ್ಯಗಳಲ್ಲಿ `ರಾಧಾ' ವೇಷವನ್ನು ಹಾಕುತ್ತಿದ್ದರು. ಆಮೇಲೆ ನಾಟಕಗಳಲ್ಲಿ ನೃತ್ಯ ಮಾಡತೊಡಗಿದ ಇವರು ಗುಬ್ಬಿ ಕಂಪನಿ ಸೇರಿದರು. ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರೂ ನೃತ್ಯದಲ್ಲಿ ಪರಿಣಿತಿ ಹೊಂದಿರುವುದರಿಂದ ಪ್ರತಿ ನಾಟಕದ ಆರಂಭದಲ್ಲಿ ಇವರೇ ನೃತ್ಯಪೂಜೆ ಮಾಡುತ್ತಿದ್ದರು. ಮುಂದೆ ಇವರ ಜೊತೆಯಲ್ಲಿ ನಾಟಕ ಮಾಡುತ್ತಿದ್ದ ವೀರಭದ್ರಪ್ಪನವರು ಮಹಾತ್ಮ ಪಿಕ್ಚರ್ಸ್‌ನವರ `ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ನಟಿಸಲು ಒಪ್ಪಿದಾಗ ಅವರ ಜೊತೆಯಲ್ಲಿ ಇವರು ಒಂದು ಚಿಕ್ಕ ಪಾತ್ರಕ್ಕೆ ಆಯ್ಕೆಯಾದರು.
ಇವರಿಗೆ ಹೆಸರು ತಂದು ಕೊಟ್ಟಿದ್ದು 1962 ರಲ್ಲಿ ತೆರೆಕಂಡ `ರತ್ನಮಂಜರಿ' ಚಿತ್ರದ `ಯಾರು ಯಾರು ನೀ ಯಾರು' ಗೀತೆ. ಹುಣಸೂರು ಕೃಷ್ಣಮುರ್ತಿಯವರ ಎಲ್ಲಾ ಚಿತ್ರಗಳಲ್ಲಿಯೂ ಇವರಿಗ ಒಂದು ಪಾತ್ರ ಇರುತ್ತಿತ್ತು. ನಂತರ ಮದ್ರಾಸಿನ `ಮಾಡರ್ನ್ ಥಿಯೇಟರ್ಸ್' ನ ಚಿತ್ರಗಳಲ್ಲಿ ನಟಿಸತೊಡಗಿದರು. ಬಾಲಕೃಷ್ಣ, ನರಸಿಂಹರಾಜು, ಡಾ.ರಾಜಕುಮಾರ್, ಪಂಡಿರಿಬಾಯಿ ಮುಂತಾದ ಕಲಾವಿದರ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.