ಮಾಸ್ಟರ್ ಮಂಜುನಾಥ್ ಎಂದೇ ಖ್ಯಾತಿಯಾಗಿರುವ ಮಂಜುನಾಥ್ ನಾಯಕರ್ ಕನ್ನಡ ಚಿತ್ರರಂಗದಲ್ಲಿ ತನ್ನ ಬಾಲ್ಯ ನಟನೆಯಿಂದ ಅದ್ಭುತ ಛಾಪನ್ನು ಮೂಡಿಸಿರುವ ನಟ. `ಮಾಲ್ಗುಡಿ ಡೇಸ್' ನ ಸ್ವಾಮಿ ಪಾತ್ರದ ಮೂಲಕ ರಾಷ್ಟ್ರವ್ಯಾಪಿ ಪ್ರಸಿದ್ಧಿ ಪಡೆದ ಮಂಜುನಾಥ್ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೀಷ್ ಮತ್ತು ಕಾಶ್ಮೀರಿ ಭಾಷೆಯಲ್ಲಿ ಕೂಡ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.
ಬಾಲನಟನಾಗಿ ಸುಮಾರು 68 ಚಿತ್ರಗಳಲ್ಲಿ ನಟಿಸಿರುವ ಮಂಜುನಾಥ್, 26 ಕಿರುತೆರೆ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಮತ್ತು 3 ಕಿರುತೆರೆ ಸೀರಿಯಲ್ ಮತ್ತು 5 ಟೆಲಿ ಫಿಲ್ಮ್ಸ ಗಳನ್ನು ನಿರ್ದೇಶಿಸಿದ್ದಾರೆ. `ಸ್ವಾಮಿ' ಇಂಗ್ಲೀಷ್ ಚಲನಚಿತ್ರಕ್ಕೆ ಆರು ಅಂತರಾಷ್ಟ್ರೀಯ ಮತ್ತು ಒಂದು ರಾಷ್ಟ್ರ ಪ್ರಶಸ್ತಿ ಬಂದಿವೆ.
ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಿನಿಮ್ಯಾಟೋಗ್ರಾಫಿಯಲ್ಲಿ ಡಿಪ್ಲೋಮಾ ಕೂಡ ಪಡೆದಿದ್ದಾರೆ. ಶಂಕರನಾಗ್ ಜೊತೆ `ನೋಡಿ ಸ್ವಾಮಿ ನಾವಿರೋದು ಹೀಗೆ',ಸಾಂಗ್ಲಿಯಾನ (ಭಾಗ 1 ಮತ್ತು 2) ರಲ್ಲಿ ನಟಿಸಿದ್ದಾರೆ. ಅಮಿತಾಭ ಬಚ್ಚನ್ ರ `ಅಗ್ನಿಪಥ' ಚಿತ್ರದಲ್ಲಿ ಬಾಲ ಅಮಿತಾಭ ಪಾತ್ರದಲ್ಲಿ ಮಿಂಚಿದ್ದರು. ತಮ್ಮ 19 ನೆ ವಯಸ್ಸಿನಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರು.
ಕೆಲಕಾಲ ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ನಲ್ಲಿ ಪಬ್ಲಿಕ್ ರಿಲೇಷನ್ ಆಫಿಸರ್ ಆಗಿ ಕೆಲಸ ಮಾಡಿದ ಮಂಜುನಾಥ್ ಸದ್ಯ ತಮ್ಮದೇ ಒಂದು ಸ್ವಂತ ಪಿಆರ್ ಕನ್ಸಲ್ಟೆನ್ಸಿ ಕಂಪನಿ ನೆಡೆಸುತ್ತಿದ್ದಾರೆ.ಮಂಜುನಾಥ್ ಕ್ರೀಡಾಪಟು ಸ್ವರ್ಣರೇಖಾ ಎಂಬುವವರನ್ನು ವಿವಾಹವಾಗಿದ್ದಾರೆ.