ಪದ್ಮಪ್ರಿಯ
ಪದ್ಮಪ್ರಿಯ ಜೀವನಚರಿತ್ರೆ
ಪದ್ಮಪ್ರಿಯ 80 ರ ದಶಕದಲ್ಲಿ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸ್ಫುರಸ್ರೂಪಿ ನಟಿ. ಕನ್ನಡದ ದಿಗ್ಗಜ ನಟರಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಶ್ರೀನಾಥ್ ಮತ್ತು ಲೋಕೇಶ್ ಜೊತೆ ನಟಿಸಿದ್ದರು. ಹಾಗೇ ತಮಿಳಿನ ದಿಗ್ಗಜ ನಟರಾದ ಎಂ.ಜಿ.ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಜೊತೆ ಕೂಡ ನಾಯಕಿಯಾಗಿ ನಟಿಸಿದ್ದರು.
ತಮ್ಮ ಸೌಂದರ್ಯದಿಂದ ದಕ್ಷಿಣ ಭಾರತದ ಹೇಮಾ ಮಾಲಿನಿ ಎಂದೇ ಕರೆಯಲ್ಪಡುತ್ತಿದ್ದ ಪದ್ಮಪ್ರಿಯ ಜಿನಿಸದ್ದು ಕರ್ನಾಟಕದಲ್ಲಿ. ಬಾಲ್ಯದ ಹೆಸರು ಪದ್ಮಲೋಚನಿ. 1975 ರಲ್ಲಿ ತೆರೆಕಂಡ ತಮಿಳಿನ `ಕರೋಟ್ಟಿ ಕಣ್ಣನ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಅದರ ಮುಂದಿನ ವರ್ಷವೇ ವಿಷ್ಣುವರ್ಧನ್ ರವರ ಬಂಗಾರದ ಗುಡಿ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ನಂತರ ತಾಯಿಗೆ ತಕ್ಕ ಮಗ, ಶಂಕರಗುರು, ಆಪರೇಷನ್ ಡೈಮಂಡ್ ರಾಕೆಟ್ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿಯೂ ಖ್ಯಾತಿ ಪಡೆದರು.
1983 ರಲ್ಲಿ ಶ್ರೀನಿವಾಸನ್ ಎಂಬುವವರನ್ನು ವಿವಾಹವಾದ ಪದ್ಮಪ್ರಿಯಾಗೆ ವಸುಮತಿ ಎಂಬ ಪುತ್ರಿಯುಂಟು. ಆದರೆ ವಿವಾಹವಾದ ಒಂದು ವರ್ಷದೊಳಗೆ ದಂಪತಿಗಳು ವಿಚ್ಚೇದನ ಪಡೆದರು. ನಂತರ ಚೆನ್ನೈನ ಟಿನಗರದಲ್ಲಿ ತಮ್ಮ ತಂದೆ-ತಾಯಿಗಳೊಂದಿಗೆ ವಾಸವಾಗಿದ್ದರು. ಕಿಡ್ನಿ ವೈಪಲ್ಯ ಕಾಣಿಸಿಕೊಂಡಿದ್ದರಿಂದ ಚಿತ್ರರಂಗಕ್ಕೆ ವಿದಾಯ ಹೇಳಿದ ಇವರು 1995 ನವೆಂಬರ್ 16 ರಂದು ಹೃದಯಾಘಾತಕ್ಕೆ ತುತ್ತಾಗಿ ಮಡಿದರು.