twitter

    ಪಾರ್ವತಮ್ಮ ರಾಜ್ ಕುಮಾರ್ ಜೀವನಚರಿತ್ರೆ

    ಕನ್ನಡ ಚಿತ್ರರಂಗದ ಶಕ್ತಿದೇವತೆಯೆಂದೇ ಪರಿಗಣಿಸಲ್ಪಡುತ್ತಿದ್ದ ಡಾ. ಪಾರ್ವತಮ್ಮ ರಾಜಕುಮಾರ್ ಕನ್ನಡದ ಪ್ರಮುಖ ಚಿತ್ರ ನಿರ್ಮಾಪಕಿ ಮತ್ತು ವಿತರಕಿ. ಡಾ.ರಾಜ್‌ಕುಮಾರ್ ಹಿಂದಿನ ಅಭೂತಪೂರ್ವ ಶಕ್ತಿಯಾಗಿ ನೆಲೆನಿಂತ ಇವರು `ಪೂರ್ಣಿಮಾ ಎಂಟರ್ಪ್ರೈಸ್' ಹುಟ್ಟು ಹಾಕಿ, ಹಲವಾರು ಕನ್ನಡ ಚಿತ್ರಗಳನ್ನು ನಿರ್ಮಿಸಿ ಕನ್ನಡಕ್ಕೆ ಅನೇಕ ನಟಿಮಣಿಯರ ಪರಿಚಯ ಮಾಡಿಸಿದ್ದಾರೆ.

    ಬಾಲ್ಯ

    1939 ರಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಸಂಗೀತ ಮೇಷ್ಟ್ರು ಅಪ್ಪಾಜಿ ಗೌಡ ಮತ್ತು ಲಕ್ಷಮ್ಮ ದಂಪತಿಗಳ ಎರಡನೇ ಮಗಳಾಗಿ ಜನಿಸಿದರು. ಇವರು ಇನ್ನೂ ತೊಟ್ಟಿಲಲ್ಲಿದ್ದಾಗಲೇ ಇವರನ್ನು ನೋಡಲು ಬಂದಿದ್ದ ಸೋದರಮಾವ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರು ಒಂದು ರೂಪಾಯಿ ಬೆಳ್ಳಿ ನಾಣ್ಯವನ್ನು ಮಗುವಿನ ಕೈಯಲ್ಲಿ ಇಟ್ಟು ಇವಳೇ ನನ್ನ ಸೊಸೆ ಎಂದು ಹೇಳಿ ಬಂದಿದ್ದರು. ಮುಂದೆ ಅದರಂತೆ ಕೇವಲ 14 ನೇ ವಯಸ್ಸಿನಲ್ಲಿಯೇ ರಾಜ್ ಕೈಹಿಡಿದರು.

    ತುಂಬು ಕುಟುಂಬದಲ್ಲಿ ಬೆಳೆದ ಪಾರ್ವತಮ್ಮ ಆರನೇ ತರಗತಿಯವರೆಗೆ ಓದಿ ಅಕ್ಷರ ಜ್ಙಾನ ಹೊಂದಿದ್ದರು. ತಮ್ಮೂರಿನ ದೇವಾಸ್ಥಾನದಲ್ಲಿದ್ದ ಒಬ್ಬ ಸನ್ಯಾಸಿನಿಯಿಂದ ಆಶೀರ್ವಾದ ಪಡೆಯಲು ಆಗಾಗ ಹೋಗುತ್ತಿದ್ದ ಪಾರ್ವತಮ್ಮನವರು ಅವರಲ್ಲಿದ್ದ ಹಲವಾರು ಪುಸ್ತಕಗಳನ್ನು ಓದುತ್ತಿದ್ದರು. 1953 ರಲ್ಲಿ ಇವರ ಕೈಹಿಡಿದ ರಾಜ್ ಮುಂದಿನ ವರ್ಷವೇ `ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸಿ ಸಿನಿರಂಗ ಪ್ರವೇಶಿಸಿದರು. ಇವರ ಸಹೋದರರಾದ ಚಿನ್ನೇಗೌಡರು ಮತ್ತು ಗೋವಿಂದೇಗೌಡರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಹಿರಿಯ ಪುತ್ರಿ ಲಕ್ಷ್ಮಿಯವರನ್ನು ಗೋವಿಂದರಾಜರಿಗೆ, ಕಿರಿಯ ಪುತ್ರಿ ಪೂರ್ಣಿಮಾರನ್ನು ಚಿತ್ರನಟ `ರಾಮಕುಮಾರ್‌ಗೆ' ಮದುವೆ ಮಾಡಿ ಕೊಡಲಾಗಿದೆ.

    ಪೂರ್ಣಿಮಾ ಎಂಟರ್‍ಪ್ರೈಸಸ್/ ವಜ್ರೇಶ್ವರಿ ಕಂಬೈನ್ಸ್

    ಮೊದಲು ರಾಜ್‌ರವರ ಚಿತ್ರಕಥೆಗಳನ್ನು ಬಾಮೈದ ವರದಣ್ಣನವರ ಜೊತೆ ಸೇರಿ ಕೇಳುತ್ತಿದ್ದ ಪಾರ್ವತಮ್ಮನವರು ರಾಜ್‌ಗಾಗಿ ಉತ್ತಮ ಕಥೆಗಳನ್ನು ಹುಡುಕುವುದರಲ್ಲಿ ನಿರತರಾಗಿರುತ್ತಿದ್ದರು. ಚಿತ್ರ ನಿರ್ಮಾಣದ ಮೂಲಭೂತ ತತ್ವಗಳನ್ನು ಅರಿತ ನಂತರ ತಾವೇ ಒಂದು ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿ ರಾಜ್‌ಗಾಗಿ ಚಿತ್ರ ನಿರ್ಮಿಸಲು ಆಲೋಚಿಸಿದರು. ಪಾರ್ವತಮ್ಮನವರು ಚಿತ್ರದ ಯಶಸ್ಸಿಗೆ ದೊಡ್ಡ ಕಲಾವಿದರು ಮಾತ್ರವಲ್ಲದೇ ಚಿತ್ರದ ಕಥೆ ಮತ್ತು ತಂತ್ರಜ್ಞರು ಕೂಡ ಮುಖ್ಯವೆಂದು ಬಲವಾಗಿ ನಂಬುತ್ತಿದ್ದರು. ಉತ್ತಮ ಸಾಹಿತ್ಯವೇ ಚಿತ್ರದ ಆತ್ಮವೆಂದು ನಂಬಿದ್ದ ಪಾರ್ವತಮ್ಮನವರು ತಮ್ಮ ಬ್ಯಾನರ್‌ ಮೂಲಕ ಹಲವಾರು ಲೇಖಕರಿಗೆ ಆಶ್ರಯವಾದರು.

    ಇವರ ಬ್ಯಾನರ್‌ನಲ್ಲಿ ಮೂಡಿಬಂದ ಮೊದಲ ಚಿತ್ರ `ತ್ರಿಮೂರ್ತಿ'. ನಂತರ `ಸನಾದಿ ಅಪ್ಪಣ್ಣ',`ಶಂಕರ ಗುರು',`ತಾಯಿಗೆ ತಕ್ಕ ಮಗ' ಹೀಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನಿರ್ಮಿಸಿದವು.ಈ ಎಲ್ಲಾ ಚಿತ್ರಗಳು ಸಮಾಜಮುಖಿಯಾಗಿ ಸದಭಿರುಚಿಯ ಚಿತ್ರಗಳಾಗಿ ಇಂದಿಗೂ ಜನಪ್ರಿಯವಾಗಿವೆ. 1986 ರಲ್ಲಿ ತಮ್ಮ ಹಿರಿಯ ಪುತ್ರ ಶಿವರಾಜಕುಮಾರ್‌ರನ್ನು `ಆನಂದ' ಚಿತ್ರದ ಮೂಲಕ,1988 ರಲ್ಲಿ ರಾಘವೇಂದ್ರ ರಾಜಕುಮಾರ್‌ನ್ನು `ಚೀರಂಜೀವಿ ಸುಧಾಕರ್' ಚಿತ್ರದ ಮೂಲಕ, 2002 ರಲ್ಲಿ ಪುನೀತ್‌ರನ್ನು `ಅಪ್ಪು' ಚಿತ್ರದ ಮೂಲಕ ನಾಯಕನಟರಾಗಿ ಚಿತ್ರರಂಗಕ್ಕೆ ಪರಿಚಯಿಸಿದರು. ತಮ್ಮ ಜೀವಿತಾವಧಿಯಲ್ಲಿ ವಜ್ರೇಶ್ವರಿ ಕಂಬೈನ್ಸ್ ಮೂಲಕ ಸುಮಾರು 78 ಚಿತ್ರಗಳನ್ನು ನಿರ್ಮಿಸಿ ದಾಖಲೆ ಮಾಡಿದ್ದಾರೆ. ನಂತರದ ದಿನಗಳಲ್ಲಿ ಇವರಿಗೆ ಪುತ್ರ ರಾಘವೇಂದ್ರ ಬೆನ್ನುಲುಬಾಗಿ ನಿಂತರು.

    ವಜ್ರೇಶ್ವರಿ ಕಂಬೈನ್ಸ್ ಮೂಲಕ ಮಾಲಾಶ್ರೀ, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯ ಮುಂತಾದ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ.

    2017 ಮೇ 14 ರಂದು ನಿಶಕ್ತಿಯಿಂದಾಗಿ ರಾಮಯ್ಯ ಆಸ್ಪತ್ರೆಗೆ ದಾಖಲಾದ ಇವರು ಮೇ 31 ರಂದು ಹೃದಯಾಘಾತಕ್ಕೀಡಾಗಿ ನಿಧನರಾದರು.

    ಡಾ.ರಾಜ್ - ಪಾರ್ವತಮ್ಮ ಬಾಂಧವ್ಯ

    1.ರಾಜ್‌ಗಾಗಿ ಚಿತ್ರಕಥೆಗಳನ್ನು ಹುಡುಕಲು ಕಾದಂಬರಿ ಓದುತ್ತಿದ್ದ ಪಾರ್ವತಮ್ಮ ಒಮ್ಮೆ `ಹಾಲು ಜೇನು' ಕಥೆ ಓದಿ ತುಂಬಾ ಇ‍ಷ್ಟಪಟ್ಟರು. ಈ ಪಾತ್ರವನ್ನು ರಾಜ್‌ ಮಾಡಲೇ ಬೇಕೆಂದು ಕಥೆಯ ಹಕ್ಕಿಗಾಗಿ ಲೇಖಕರನ್ನು ಸಂಪರ್ಕಸಿದಾಗ ಅವರು ಅದನ್ನು ಬೇರೆ ಯಾರಿಗೋ ಮಾರಲು ವಿಚಾರಿಸುತ್ತಿದ್ದಾಗ ಪಾರ್ವತಮ್ಮ ಅವರ ಮನವೊಲಿಸಿ ಆಗಿನ ಕಾಲದಲ್ಲಿ ಒಂದು ಲಕ್ಷ ರೂಪಾಯಿ ಹೆಚ್ಚಿಗೆ ಕೊಟ್ಟು ಕಥಾಹಕ್ಕನ್ನು ಖರೀದಿಸಿದ್ದರು. ಇದು ಪಾರ್ವತಮ್ಮನವರು ಚಿತ್ರಕಥೆಗೆ ನೀಡುತ್ತಿದ್ದ ಮಹತ್ವ.

    2.ಮದುವೆಗೆ ಮುಂಚೆ ಪಾರ್ವತಮ್ಮನವರು ತಮ್ಮ ತಾಯಿಗೆ ಡೆಲಿವರಿಯಾದಾಗ ಚಾಮರಾಜನಗರದ ಹತ್ತಿರವಿರುವ ಹಳ್ಳಿಯೊಂದರ ಅಜ್ಜಿಯ ಮನೆಯಲ್ಲಿದ್ದರು. ಆಗ ಅಣ್ಣಾವ್ರು ಇನ್ನು ನಾಟಕದಲ್ಲಿ ಅಭಿನಯಿಸುತ್ತಿದ್ದರು. ನಾಟಕದ ನಿಮಿತ್ತ ರಾಜ್ ಚಾಮರಾಜನಗರಕ್ಕೆ ಬಂದಿದ್ದರು. ಆಗ ಪುಟ್ಟಸ್ವಾಮಯ್ಯನವರು ಪಾರ್ವತಿ ಒಂದೆರೆಡು ತಿಂಗಳು ನಮ್ಮ ಜೊತೆ ಇರಲಿ ಹೋಗಿ ಕರೆದುಕೊಂಡು ಬಾರೆಂದು ರಾಜ್‌ರನ್ನು ಕಳುಹಿಸಿ ಕೊಟ್ಟರು.ಆಗ ರಾಜ್ ಆ ಹಳ್ಳಿಯಿಂದ ತಮ್ಮ ಭಾವಿಪತ್ನಿಯನ್ನು 9 ಮೈಲಿ ದೂರವಿರುವ ಚಾಮರಾಜನಗರದವರೆಗೂ ಸೈಕಲ್ ಮೇಲೆ ಕೂರಿಸಿಕೊಂಡು ಬಂದಿದ್ದರು. ಮತ್ತೊಮ್ಮೆ ಪಾರ್ವತಮ್ಮ 7 ವರ್ಷದವರಿದ್ದಾಗ ಯಡಿಯೂರು ಜಾತ್ರೆಗೆ ಸೈಕಲ್ ಮೇಲೆ ಕರೆದುಕೊಂಡು ಹೋಗಿದ್ದರು.

    3.ಪಾರ್ವತಮ್ಮನವರು ಮಾಡುತ್ತಿದ್ದ ಮಟನ್ ಫ್ರೈ ರಾಜ್‌ಕುಮಾರ್ ತುಂಬಾ ಇಷ್ಟಪಡುತ್ತಿದ್ದರು. ಎಷ್ಟೋ ಬಾರಿ ಶೂಟಿಂಗ್ ಗಾಗಿ ಹೊರಗಡೆ ಹೋಗುತ್ತಿದ್ದ ರಾಜ್‌ಗಾಗಿ ಹಲವು ದಿನಗಳಿಗಾಗುವಷ್ಟು ಫ್ರೈ ಮಾಡಿ ಕಳಿಸುತ್ತಿದ್ದರು.

    4.ಮೊದಲೆಲ್ಲಾ ಚಿತ್ರಗಳು ನೂರು ದಿನ ಆಚರಿಸುವಾಗ ಮುಖ್ಯ ಕಲಾವಿದರಿಗಷ್ಟೇ ಬೆಳ್ಳಿ ಫಲಕಗಳನ್ನು ಕೊಡುತ್ತಿದ್ದರು. ಆದರೆ ರಾಜ್‌ರವರ ಆಸೆಯ ಮೇರೆಗೆ ಚಿತ್ರದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಙರಿಗೆ ಬೆಳ್ಳಿ ಪದಕವನ್ನು ನೀಡಲು ಮೊದಲು ಆರಂಭಿಸಿದ ಶ್ರೇಯ ವಜ್ರೇಶ್ವರಿ ಕಂಬೈನ್ಸಗೆ ಸೇರುತ್ತದೆ.

    ಡಾ.ರಾಜಕುಮಾರ್   ಶಿವರಾಜಕುಮಾರ್

    ರಾಘವೇಂದ್ರ ರಾಜಕುಮಾರ್  ಪುನೀತ್ ರಾಜಕುಮಾರ್

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X