ರಂಜನಿ ರಾಘವನ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಮಾಡಿರುವ ರಂಜನಿ, ಒಬ್ಬ ಸೃಜನಶೀಲ ಬರಹಗಾರ್ತಿ ಕೂಡ ಹೌದು.
ಕಿರುತೆರೆ
ರಂಜನಿ ರಾಘವನ್ 2014ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಇದಾದ ಬಳಿಕ ಪೌರ್ಣಮಿ ಎಂಬ ಮಲಯಾಳಂ ಸೀರಿಯಲ್‌ನಲ್ಲಿ ಅಭಿನಯಿಸಿದರು. 2019ರಲ್ಲಿ 'ಇಷ್ಟದೇವತೆ' ಎಂಬ ಧಾರಾವಾಹಿಯಲ್ಲಿ ನಟಿಸಿದರು. ಈ ಸೀರಿಯಲ್‌ಗೆ ತಾವೇ ಕಥೆ ಬರೆದು ಕ್ರಿಯೇಟಿವ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. 2020ರಲ್ಲಿ ಕನ್ನಡತಿ ಎಂಬ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದರು. ಈ ಧಾರಾವಾಹಿ ಹಿಟ್ ಆಗುವುದರ ಜೊತೆಗೆ ರಂಜನಿ ಜನಪ್ರಿಯತೆ ಕೂಡ ಹೆಚ್ಚಿದೆ. ಶೀರ್ಷಿಕೆಗೆ ತಕ್ಕಂತೆ ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿತ್ತು. ಹೀಗಾಗಿ ಮಹಿಳೆಯರು, ಪುರುಷರ ಜೊತೆ ಕನ್ನಡಾಭಿಮಾನಿಗಳು ಕೂಡ ಈ ಧಾರಾವಾಹಿಯನ್ನು ಹೆಚ್ಚಾಗಿ ಇಷ್ಟಪಟ್ಟು ನೋಡುತ್ತಿದ್ದರು.
ಸಿನಿಮಾ
ರಂಜನಿ 2017ರಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಬರಹಗಾರ್ತಿ
ನಟಿ ಮಾತ್ರವಲ್ಲದೇ ಉತ್ತಮ ಬರಹಗಾರ್ತಿಯಾಗಿರುವ ರಂಜನಿ, ಕಥೆ ಡಬ್ಬಿ ಎಂಬ ಪುಸ್ತಕ ಬರೆದಿದ್ದರು. ಇದು ಕ್ನಡ ಸಾಹಿತ್ಯ ಪ್ರೇಮಿಗಳ ಹಾಗೂ ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. 2022ರ ಡಿಸೆಂಬರ್ 7ರಂದು ಸ್ವೈಪ್ ಅಪ್ ಎಂಬ ಇನ್ನೊಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.