ಶ್ರೀದೇವಿ
ಶ್ರೀದೇವಿ ಜೀವನಚರಿತ್ರೆ
ಶ್ರೀ ಅಮ್ಮಯಂಗರ್ ಅಯ್ಯಪ್ಪನ್ ಹೆಸರಿನಿಂದ ಜನಿಸಿದ ಶ್ರೀದೇವಿ ಭಾರತೀಯ ಚಿತ್ರರಂಗದ ಖ್ಯಾತ ನಟಿ. ಭಾರತೀಯ ಸಿನಿರಂಗದ ಮೊತ್ತ ಮೊದಲ ಮಹಿಳಾ ಸೂಪರಸ್ಟಾರ್ ಎಂದು ಇವರನ್ನು ಕರೆಯುತ್ತಾರೆ. ತಮಿಳು ಹಿಂದಿ, ತೆಲಗು, ಮಲಯಾಳಂ ಮತ್ತು ಕನ್ನಡ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ರಾಷ್ಟೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ.
ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಡಾ.ರಾಜ್ ರ ಭಕ್ತ ಕುಂಬಾರದಲ್ಲಿ ಮುಕ್ತಾಭಾಯಿ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಹೆಣ್ಣು ಸಂಸಾರದ ಕಣ್ಣು, ಸಂಪೂರ್ಣ ರಾಮಾಯಣ, ಪ್ರಿಯಾ ಸೇರಿದಂತೆ ಕನ್ನಡದಲ್ಲಿ ಒಟ್ಟು 6 ಚಿತ್ರಗಳಲ್ಲಿ ನಟಿಸಿದ್ದಾರೆ. 1963 ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದರು. ತಂದೆ ಅಯ್ಯಪ್ಪನ್ ವಕೀಲರಾದರೆ ,ತಾಯಿ ರಾಜೇಶ್ವರಿ ಗೃಹಿಣಿ.
1967 ರಲ್ಲಿ ತೆರೆಕಂಡ ತಮಿಳು ಕಂದನ್ ಕರುಣಯೈ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶ್ರೀದೇವಿ 1976 ರಲ್ಲಿ ಕೆ.ಬಾಲಚಂದರ್ ಚಿತ್ರದ ಮೂಲಕ ನಾಯಕಿಯಾದರು. ನಂತರ ಕೆಲ ಕಾಲ ದಕ್ಷಿಣ ಚಿತ್ರರಂಗದ ನಾಲ್ಕು ಭಾಷೆಗಳಲ್ಲಿ ನಟಿಸಿದ ಇವರು 1979 ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಬಾಲಿವುಡ್ ನಲ್ಲಿ ಶ್ರೀದೇವಿ- ಜಿತೇಂದ್ರ ಜೋಡಿ ತುಂಬಾ ಪ್ರಸಿದ್ಧಿಯಾಯಿತು, ಈ ಜೋಡಿ ಒಟ್ಟಾಗಿ ನಟಿಸಿದ 16 ಚಿತ್ರಗಳಲ್ಲಿ 13 ಚಿತ್ರಗಳು ಹಿಟ್ ಆದವು. ಹಾಗೇ ತಮಿಳಿನ ಸದ್ಮಾ ಚಿತ್ರ ಕೂಡ ಶ್ರೀದೇವಿಗೆ ತುಂಬಾ ಖ್ಯಾತಿ ತಂದು ಕೊಟ್ಟಿತು. ನಂತರ ಬಂದ ನಾಗಿನಾ, ಮಿ, ಇಂಡಿಯಾ ಚಿತ್ರಗಳು ಕೂಡ ಶ್ರೀದೇವಿಯನ್ನು ಭಾರತದ ಬಹುದೊಡ್ಡ ಸೂಪರ್ ಸ್ಟಾರ್ ನಟಿಯನ್ನಾಗಿ ಮಾಡಿದವು.
1996 ರಲ್ಲಿ ನಿರ್ಮಾಪಕ ಬೋನಿ ಕಪೂರ್ ರವರನ್ನು ವಿವಾಹವಾದ ಶ್ರೀದೇವಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಜಾಹ್ನವಿ ಪ್ರಸ್ತುತ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ. 2018 ಫೆಬ್ರವರಿ 24 ರಂದು ದುಬೈಗೆ ತಮ್ಮ ಸಂಬಂಧಿಕರ ಮದುವೆಗೆ ಹೋಗಿದ್ದ ಶ್ರೀದೇವಿ ತಾವು ತಂಗಿದ್ದ ಹೊಟೇಲ್ ಬಾತ್ ಟಬ್ ನಲ್ಲಿ ಮುಳುಗಿ ವಿಧಿವಶರಾದರು.