ಸುಧಾರಾಣಿ ಕನ್ನಡ ಚಿತ್ರರಂಗ ಜನಪ್ರಿಯ ನಟಿ. ಇವರು 1970ರ ಆಗಸ್ಟ್ 14ರಂದು ಜನಿಸಿದರು. ಇವರ ತಂದೆ ಗೋಪಾಲಕೃಷ್ಣ ಮತ್ತು ತಾಯಿ ನಾಗಲಕ್ಷ್ಮೀ. ಮೂರನೇ ವಯಸ್ಸಿಗೆ ಜಾಹೀರಾತುವೊಂದರಲ್ಲಿ ಕಾಣಿಸಿಕೊಂಡಿದ್ದ ಇವರು, ಭರತನಾಣ್ಯ ಹಾಗೂ ಕುಚುಪುಡಿ ಕಲಾವಿದೆ ಕೂಡ.
ಸಿನಿಮಾರಂಗ
1978ರಲ್ಲಿ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಟನೆಯ ಕಿಲಾಡಿ ಕಿಟ್ಟು ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆನಂತರ ಕುಳ್ಳ ಕುಳ್ಳಿ, ಭಾಗ್ಯವಂತ, ರಂಗನಾಯಕಿ, ಬಾಡದ ಹೂ, ಅನುಪಮ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರಿಗೆ ಸುಧಾರಾಣಿ ಎಂಬ ಹೆಸರು ನೀಡಿ, ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಸಿನಿರಂಗಕ್ಕೆ ಪರಿಚಯ ಮಾಡಿದರು.
1986ರಲ್ಲಿ ತೆರೆಕಂಡ 'ಆನಂದ್' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೋಡಿಯಾಗಿ ಕಾಣಸಿಕೊಂಡರು. ಆನಂತರ ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಮನೆದೇವ್ರು, ಸಪ್ತಪದಿ, ಮಣ್ಣಿನ ದೋಣಿ, ಅಣ್ಣ-ತಂಗಿ, ಮಿಡಿದ ಶೃತಿ ಸೇರಿದಂತೆ ಹಲವು ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಇವರು ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕೆಲ ತಮಿಳು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.
ಮದುವೆ: ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಟಿ ಸುಧಾರಾಣಿ, ನಟನೆಗೆ ಗುಡ್‌ಬೈ ಹೇಳಿ 1996ರಲ್ಲಿ ಡಾ.ಸಂಜಯ್ ಎಂಬುವವರನ್ನು ಮದುವೆಯಾಗಿ ಅಮೇರಿಕಾ ಸೇರಿದರು. ಆದರೆ, ಅವರಿಗೆ ಮೊದಲ ಪತಿಯಿಂದ ದಾಂಪತ್ಯದ ಸುಖ ಸಿಗಲೇ ಇಲ್ಲ. ಬದಲಾಗಿ ಪತಿ ಡಾ.ಸಂಜಯ್ ಅವರಿಂದ ಪ್ರಾಣ ಬೆದರಿಕೆ ಇತ್ತು. 1998ರಲ್ಲಿ ಅಮೆರಿಕಾದಲ್ಲಿ ಚಿತ್ರಹಿಂಸೆ ನೀಡಿದ ಡಾ.ಸಂಜಯ್‌ಗೆ ವಿಚ್ಛೇದನ ನೀಡಿ, ಭಾರತಕ್ಕೆ ಮರಳಿದ ಮೇಲೆ ಹೊಸ ಜೀವನ ಆರಂಭಿಸಿದರು. ನಂತರ ತಮ್ಮ ಕುಟುಂಬಕ್ಕೆ ತೀರಾ ಆಪ್ತರಾಗಿದ್ದ, ತಮಗೆ ಮಾನಸಿಕ ಸ್ಥೈರ್ಯ ತುಂಬಿದ್ದ ಗೋವರ್ಧನ್ ಎಂಬುವರನ್ನು ಮದುವೆ ಆದರು. ಈ ದಂಪತಿಗೆ ನಿಧಿ ಎಂಬ ಮಗಳಿದ್ದಾಳೆ.
ಕಿರುತೆರೆ
ಬೆಳ್ಳಿತೆರೆ ಜೊತೆಗೆ ಕಿರುತೆರೆಗೂ ಎಂಟ್ರಿಕೊಟ್ಟಿರುವ ಸುಧಾರಾಣಿ, ಸದ್ಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಪ್ರಶಸ್ತಿಗಳು
ಮನಮೆಚ್ಚಿದ ಹುಡುಗಿ (1987)- ಅತ್ಯುತ್ತಮ ನಟಿ ಪ್ರಶಸ್ತಿ
ಪಂಚಮ ವೇದ (1991)- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
ಮೈಸೂರು ಮಲ್ಲಿಗೆ (1992)- ಫಿಲ್ಮ್‌ಫೇರ್ ಪ್ರಶಸ್ತಿ
ಮೈಸೂರು ಮಲ್ಲಿಗೆ (1992)- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
ಸ್ಪರ್ಶ (2000)- ಫಿಲ್ಮ್‌ಫೇರ್ ಪ್ರಶಸ್ತಿ
ವಾಸ್ತು ಪ್ರಕಾರ (2015)- ಫಿಲ್ಮ್‌ಫೇರ್ ಪ್ರಶಸ್ತಿ