ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ. 1943ರಲ್ಲಿ ಮುನಿಸ್ವಾಮಿ ಮತ್ತು ಪಾರ್ವತಮ್ಮ ದಂಪತಿಗಳ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದ ಇವರು, ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡರು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಮುಂಚೂಣಿಯಿಂದ ಕಾಣಿಸಿಕೊಳ್ಳುತ್ತಿದ್ದ ಶ್ರೀನಿವಾಸ್, ಮುಂದೆ ಖ್ಯಾತ ನಿರ್ಮಾಪಕ ಎಂ.ಪಿ.ಶಂಕರ್ ತಂಡ ಸೇರಿದರು.
ಮೈಸೂರಿನವರೇ ಆದ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿಯವರು ಇವರ ನಾಟಕ ನೋಡಿ ಮೆಚ್ಚಿಕೊಂಡು ತಮ್ಮ ಚಿತ್ರ `ತೂಗುದೀಪ'ದಲ್ಲಿ ಅವಕಾಶ ನೀಡಿದರು. ಆ ಚಿತ್ರದ ಹಾಡುಗಳಿಗೆ ಗಾಯಕ ಪಿ.ಬಿ.ಶ್ರೀನಿವಾಸ ಧ್ವನಿ ನೀಡಿದ್ದರು. ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಇಬ್ಬರು ಶ್ರೀನಿವಾಸ ಹೆಸರುಗಳು ಬೇಡವೆಂದು ಸ್ವಾಮಿಯವರು ಶ್ರೀನಿವಾಸರಿಗೆ ತೂಗುದೀಪ ಶ್ರೀನಿವಾಸ ಎಂದು ಹೆಸರು ನೀಡಿದರು.
ಈ ಚಿತ್ರದ ನಂತರ `ಮೇಯರ್ ಮುತ್ತಣ್ಣ',`ಬಂಗಾರದ ಮನುಷ್ಯ',`ಗಂಧದ ಗುಡಿ',ಕಳ್ಳ-ಕುಳ್ಳ',`ಸಾಹಸ ಸಿಂಹ' ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಪ್ರಮುಖ ಖಳನಟನಾಗಿ ಗುರುತಿಸಿಕೊಂಡರು. ವರನಟ ರಾಜಕುಮಾರ್‌ರ ಹೆಚ್ಚಿನ ಚಿತ್ರಗಳಲ್ಲಿ ತೂಗುದೀಪರಿಗೆ ಒಂದು ಪಾತ್ರ ಇದ್ದೇ ಇರುತಿತ್ತು.
ವಿವಾಹ; 1973ರಲ್ಲಿ ಮೀನಾರವನ್ನು ಕೈ ಹಿಡಿದ ತೂಗುದೀಪರಿಗೆ ಒಬ್ಬ ಪುತ್ರಿ ಮತ್ತು ಇಬ್ಬರು ಪುತ್ರರಿದ್ದಾರೆ. ಹಿರಿಯ ಪುತ್ರ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿರಿಯ ಪುತ್ರ ದಿನಕರ್ ತೂಗುದೀಪ ನಿರ್ದೇಶಕರಾಗಿ ಪ್ರಸಿದ್ದರಾಗಿದ್ದಾರೆ. ಮೂತ್ರಪಿಂಡ ವೈಕಲ್ಯದಿಂದ ಬಳಲಿದ ತೂಗುದೀಪರಿಗೆ ಅವರ ಪತ್ನಿ ಮೀನಾರವರೇ ಕಿಡ್ನಿ ನೀಡಿದ್ದರು.
ನಿಧನ: ತೂಗುದೀಪ ಶ್ರೀನಿವಾಸ್ ಅವರು 1995ರ ಅಕ್ಟೋಬರ್ 16ರಂದು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು.